ಕುಂಬಳೆ ಅರಸರಿಗೆ ಪಟ್ಟ ಕಟ್ಟುವಾಗ ಪಟ್ಟವೇರುವ ಅರಸನ ಹೆಸರು, ತೇದಿ ಮೊದಲಾದ ವಿವರಗಳನ್ನು ಒಂದು ಚಿನ್ನದ ತಗಡಿನಲ್ಲಿ ಬರೆದು ಕುಂಬಳೆಯ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಅದನ್ನು ಅವನ ಹಣೆಗೆ ಕಟ್ಟುವರು. ಅಲ್ಲಿಂದ ಅಡೂರು ದೇವಸ್ಥಾನಕ್ಕೆ ಹೋಗಿ ಅಲ್ಲಿ ಅದನ್ನು ವಿಸರ್ಜಿಸುವ ಒಂದು ರೂಢಿ ಇದೆ. ಅಡೂರು ದೇವಸ್ಥಾನದಲ್ಲಿ ಅಂಥ 34 ಪಟ್ಟಿಗಳಿವೆಯಂತೆ. ಆ 34 ತಲೆಗಳ ಕಾಲವನ್ನು ಲೆಕ್ಕ ಹಾಕಿದರೆ ಹೆಚ್ಚು ಕಡಿಮೆ ಶಾಸನದ ಕಾಲಕ್ಕೇ ಬರುತ್ತೇವೆ.
ಶಾಸನದಲ್ಲಿ ಹೇಳಿದ ಮೂರನೇ ಜಯಸಿಂಹನ ಕಾಲದಲ್ಲಿ ಶ್ರೀ ಮಧ್ವಾಚಾರ್ಯರು ತಾವು ಮಠಕ್ಕೆ ಬಂದು ತ್ರಿವಿಕ್ರಮ ಪಂಡಿತಾಚಾರ್ಯನನ್ನು ಗೆದ್ದು ವಿಜಯ ಧ್ವಜವನ್ನು ಸ್ಥಾಪಿಸಿದರು.
ಮೇಲಾಪುರ ಮಹಾತ್ಮ್ಯೆ ಪ್ರಕಾರ ಒಂದನೇ ಜಯಸಿಂಹನ ಕತೆಯನ್ನು ಸಂಕ್ಷೇಪವಾಗಿ ಹೀಗೆ ಹೇಳಬಹುದು:
ಬನವಸೆಯ ಮಯೂರವರ್ಮನ ಮಗನಾದ ಚಂದ್ರಾಂಗದನು ಗೋಮಾಂತಕದಿಂದ ಪಯಸ್ವಿನೀ ನದಿಯವರೆಗಿನ ರಾಜ್ಯವನ್ನು ಧರ್ಮದಿಂದ ಅಳುತ್ತಿದ್ದನು. ಒಮ್ಮೆ ಅವನು ಕುಟುಂಬಸಹಿತನಾಗಿ ದಕ್ಷಿಣ ದೇಶದ ತೀರ್ಥಕ್ಷೇತ್ರಗಳನ್ನು ಸಂದರ್ಶಿಸುತ್ತಾ ರಾಮೇಶ್ವರದ ಕೋಟಿತೀರ್ಥದಲ್ಲಿ ಮಿಂದು ಹಿಂದೆ ಬರುತ್ತಾ ಕಣ್ವಋಷಿಗಳಿಂದ ಪಾವನವಾದ ಕಣ್ಣಪುರಕ್ಕೆ ಬಂದಿಳಿದನು.
ಅಲ್ಲಿ ಆವನ ಮಗಳು ಸುಶೀಲಾದೇವಿಯು ಕುಂಭಿನೀ ನದಿಯಲ್ಲಿ ಸ್ನಾನ ಮಾಡುತ್ತಿರಲು ಗಂಧರ್ವ ಪೀಡಿತಳಾಗಿ ಮೂರ್ಛೆಗೊಂಡಳು. ಎಂಟು ದಿನಗಳಾದರೂ ಮೂರ್ಛೆಯಿಂದೇಳಲಿಲ್ಲ. ಏನೇನು ಚಿಕಿತ್ಸೆ ಮಾಡಿದರೂ ಗುಣವಾಗಲಿಲ್ಲ. ಚಂದ್ರಾಂಗದನು ದುಃಖದಲ್ಲಿ ಬಿದ್ದನು.
ಆಗ ಯಾತ್ರಾರ್ಥಿಯಾಗಿ ಹೋಗುತ್ತಿದ್ದ ಒಬ್ಬ ಬ್ರಾಹ್ಮಣನು ಅಕಸ್ಮಾತ್ತಾಗಿ ಅದೇ ನದಿಗೆ ಬಂದು ಸ್ನಾನಕ್ಕಿಳಿದನು. ರಾಜಕುಮಾರಿಯು ಮೂರ್ಛೆಗೊಂಡ ಸುದ್ದಿಯನ್ನು ಕೇಳಿ ಅರಸನ ಶಿಬಿರಕ್ಕೆ ಹೋಗಿ ಅವನ ಸಮ್ಮತಿಯನ್ನು ಪಡೆದು ಮಂತ್ರ-ತಂತ್ರಗಳಿಂದ ಗಂಧರ್ವ ಬಾಧೆಯನ್ನು ನಿವಾರಿಸಿದನು. ಚಂದ್ರಾಂಗದನು ಅತ್ಯಂತ ಹರ್ಷಿತನಾದನು. ತೇಜೋವಂತನಾದ ಆ ತರುಣನಿಗೆ ಕುಮಾರಿಯನ್ನು ಕೊಟ್ಟು ಗಾಂಧರ್ವ ವಿಧಿಯಿಂದ ವಿವಾಹ ಮಾಡಿಸಿದನು.
ಬಳಿಕ ಕುಂಭೀನೀ ನದಿಯ ಎಡದಡದಲ್ಲಿ ಭವ್ಯವಾದ ಅರಮನೆಯನ್ನು ಕಟ್ಟಿಸಿ ಸುತ್ತಲೂ ಕೋಟೆಕೊತ್ತಳಗಳನ್ನು ನಿರ್ಮಿಸಿ ನೇತ್ರಾವತಿಯಿಂದ ಚಂದ್ರಗಿರಿ ನದಿಯವರೆಗಿನ ತುಳು ಸೀಮೆಯನ್ನು ಮಗಳಿಗೆ ದತ್ತಿಯಾಗಿ ಬಿಟ್ಟನು. ಮುನ್ನೂರು ಆನೆ, ಸಾವಿರ ಕುದುರೆ, ನೂರುಮಂದಿ ಗೌಡಿಯರನ್ನೂ ಬಳುವಳಿಯಾಗಿ ಕೊಟ್ಟನು. ಕೆಲವು ದಿನಗಳ ಬಳಿಕ ಬನವಸೆಗೆ ಮರಳಿದನು.
(ನಾಳೆಗೆ ಮುಂದುವರಿಯುವುದು.)