HEALTH TIPS

‘ಮಂಜೇಶ್ವರದ ಮುತ್ತಿಗೆ’: ಬೇಕಲ ರಾಮನಾಯಕರು ಬರೆದ ಐತಿಹಾಸಿಕ ಕಥೆ:ಃ ಭಾಗ: 02

                  ಆಗ ತುಳುರಾಜ್ಯಕ್ಕೆ ಕೆಳದಿಯ ವೀರಮ್ಮಾಜಿಯು ರಾಣಿಯಾಗಿದ್ದಳು. ಅವಳ ದೈವಭಕ್ತಿ, ಧರ್ಮಶ್ರದ್ಧೆ ಹೆಸರಾಗಿತ್ತು. ಆದರೆ ಅವಳಿಗೆ ತಲೆತುಂಬ ವೈರಿಗಳು. ನೆರೆಯ ರಾಯರೆಲ್ಲ ಆವಳ ರಾಜ್ಯಕ್ಕೆ ಕಾಳಾಗಿದ್ದರು. ಹೈದರಾಲಿಯು ಹೇಗಾದರೂ ಅವಳನ್ನು ಸಿಂಹಾಸನದಿಂದ ಉರುಳಿಸಬೇಕೆಂದು ಹೊಂಚುಹಾಕುತ್ತಿದ್ದನು. ಈ ಬಿಕ್ಕಟ್ಟಿನಲ್ಲಿ ರಾಜ್ಯವು ಎಳಕವಾಗಿ ಅಲ್ಲಾಡುತ್ತಿದ್ದಿತು. ಈ ಸಂಧಿಯನ್ನೇ ಕಾದುಕೊಂಡಿದ್ದ ಮರಾಟೆಯ ದಳವಾಯಿ ಕನ್ನೋಜಿ  ಅಂಗ್ರಿಯನೆಂಬವನೊಬ್ಬನು ಸಾವಿರ ಮಂದಿ ಪಿಂಡಾರಿಗಳೊಂದಿಗೆ ಕಣ್ಣಾನೂರ ಸುಲ್ತಾನ್ ಆಲಿ ರಾಜನನ್ನು ಭೇಟಿಯಾದನು. ಗೆಳೆಯರಿಬ್ಬರೂ ಕುಶಲದ ಮಾತುಕತೆಗಳನ್ನಾಡಿದ ಬಳಿಕ ಅಂಗ್ರಿಯನು ತುಳುರಾಜ್ಯದ ಪುರಾತನ ಕ್ಷೇತ್ರಗಳ ಪ್ರಸ್ತಾಪವೆತ್ತಿದನು. ಕೊಲ್ಲೂರಲ್ಲಿ ಪೂರ್ವದ ರಾಜ ಮಹಾರಾಜರು ಕೊಟ್ಟ ವಜ್ರದ ಕಿರೀಟ, ರತ್ನ ಕವಚ, ಅಂಗೈಹರದ ಹಸುರು ಮಣಿ ಮೊದಲಾದ ಅಮೂಲ್ಯ ರತ್ನಾಭರಣಗಳಿವೆ. ಮಂಜೇಶ್ವರದಲ್ಲಿಯೂ ಅಸಂಖ್ಯ ಬೆಲೆಯು ನಗನಾಣ್ಯಗಳು ತುಂಬಿ ತುಳುಕುತ್ತಿವೆ. ಪ್ರಾಕ್ಕಾಲದಿಂದ ಬಂದ ಈ ವಿಪುಳ ಸಂಪತ್ತೆಲ್ಲ ಇಂದಿಗೂ ಹೇಗೋ ಅಲ್ಲಿ ಉಳಿದುಕೊಂಡಿವೆ. ಅವೆಂದೂ ಅಲ್ಲೇ ಹೆಚ್ಚು ಕಾಲ ಉಳಿಯಲು ಶಕ್ಯವಿಲ್ಲ. ಧೀರರ ತೋಳ ಪರಾಕ್ರಮಕ್ಕೆ ಅವೆಲ್ಲ ಒಂದು ದಿನ ವಶವಾಗದಿರವು, ಮರಾಟರ ತಂಡಗಳೆಷ್ಟೋ  ಮೊಗಸುತ್ತಿವೆಯಂತೆ, ನಾವೀಗ ಒಂದು ಕೈ ನೋಡಿದರಾಗದೇ ? ಸುಲ್ತಾನ್, ಪ್ರಕೃತ ಸಂಧಿಯೂ ತುಂಬ ಅನುಕೂಲಕರವಾಗಿದೆ’ ಎಂದನು.-“ಆಗದೆ ಏನು ? ನಾಳೆಯೇ ಹೊರಡೋಣ, ದ್ವೀಪಾಂತರದ ರಾಜರನ್ನು ಸೋಲಿಸಿ ಅವರ ಕಣ್ಣು ಕಿತ್ತ ನಮ್ಮ ತೋಳ್ಬಲವೇನು ಸಾಮಾನ್ಯವೇ ಎಂದು ಗಹಗಹಿಸಿದನು. 

                      ಕ್ರಿ. ಶ. 1775 ನೆಯ ಇಸವಿಯ ಒಂದು ದುರ್ದಿನದಲ್ಲಿ ಸುಲ್ತಾನ್ ಆಲಿರಾಜನು ತನ್ನ 70 ಮಂಜಿಗಳಲ್ಲಿ ಮೂರು ಸಾವಿರ ಯವನ ವೀರರೊಂದಿಗೆ ಮಂಜೇಶ್ವರ ಬಂದರಿನಲ್ಲಿಳಿದನು.  ಕನ್ನೊಜಿ ಆಂಗ್ರಿಯನೂ ತನ್ನ ಸಾವಿರ ಮಂದಿ ಯೋಧರೊಂದಿಗೆ ಮುಗುಡಿಯಲ್ಲಿದ್ದನು. ಗುಲ್ಲೋ ಗುಲ್ಲು ಎಂಬ ಬೊಬ್ಬೆಯು ಗಾಳಿಯಲ್ಲಿ ತೇಲುತ್ತಾ ಬಂತು. ಗುಲ್ಲಿನ ಸುದ್ದಿಯನ್ನು ಕೇಳುತ್ತಲೇ ಬಲ್ಲಾಳ ತ್ಯಾಮಪ್ಪ ಶೆಟ್ಟಿಯ ತೋಳುಗಳಲ್ಲಿ ಶೌರ್ಯ ಮಸೆಯಿತು. ಅವನ ನರನಾಡಿಗಳಲ್ಲಿ ರಕ್ತವು ಕುದಿಗೊಂಡು ಉಚ್ಚಳಿಸಿತು. ಆ ಜನಹಿತ ದಕ್ಷನು ಏನು ಮಾಡುವುದೆಂದು  ಯೋಚನೆಗೀಡಾದನು.


               ಅಷ್ಟರಲ್ಲಿ ತನ್ನ ಹತ್ತು ಗ್ರಾಮಗಳ ಹೆಗ್ಗಡೆಯವರು, ಗುರಿಕಾರರು ಎಲ್ಲರೂ ಬಂದರು. ತಮಗೆ ನಿರ್ದಿಷ್ಟವಾದ ಚಾವಡಿಯ 16 ಕಂಬಗಳ ಬಳಿಯಲ್ಲಿ ಜೋಲು ಮೋರೆ ಹಾಕಿಕೊಂಡು ಕುಳಿತರು. ನೆರೆಯ ರಾಯರಿಗೆ ಹೇಳಿ ಕಳಿಸುವಷ್ಟು ಸಮಯಾವಕಾಶವಿರಲಿಲ್ಲ.  ಕೋಟೆಯಲ್ಲಿ ಒಂದು ಚಿಕ್ಕ ದಳ ಮಾತ್ರವಿತ್ತು. ಏನು ಮಾಡುವುದೆಂದು ಯಾರಿಗೂ ತೋರಲಿಲ್ಲ. ಪುಂಡರ ಆ ದಂಡು ಏನು ಮಾಡುವುದೋ ಏನೋ. ಮಂಜೇಶ್ವರ ದೇವಾಲಯವನ್ನು ಭ್ರಷ್ಟಗೊಳಿಸದೆ ಇರಲಾರದು. ಎಷ್ಟು ಮನೆಗಳನು ಹಾಳುಗೆಡಹುವರೋ ? ಎಷ್ಟು ಕುಲೀನೆಯರ ಮಾನಹಾನಿಗೊಳಿಸುವರೋ ಎಂದು ಬಲ್ಲಾಳನು ಮಮ್ಮಲ ಮುರುಗಿದನು. ಸೀಮೆಯ ಯಾರಿಗಾದರೂ ಮಾನಭಂಗವಾದರೆ ತನ್ನ ರಕ್ತ ದಿಂದ ಅದನ್ನು ತೊಳೆಯುವ ಅಭಿಮಾನಿಯಾಗಿದ್ದನವನು. ಅವನ ನಿಟ್ಟುಸಿರಿನೊಂದಿಗೆ ಎಲ್ಲರೂ ನಿಟ್ಟುಸಿರಿಟ್ಟರು. ಯಾರ ಬಾಯಿ0ದಲೂ ಮಾತು ಹೊರಡಲಿಲ್ಲ.

               ಶೆಟ್ಟಿಯು ಸಭೆಯಿಂದ ಎದ್ದು ಒಳಕ್ಕೆ ನಡೆದನು, ಏನೋ ಒಂದು ನಿರ್ಧಾರವು ಅವನ ಮನಸ್ಸಿನಲ್ಲಿ ಮೂಡಿತ್ತು. ಒಳಗೆ ಹೋಗಿ ಅವನು ದಟ್ಟ ಚಲ್ಲಣವನ್ನು ಬಿಗಿದನು. ಕವಚ ಹಿಡಿದುಕೊಂಡು ಹೊರಗಿಳಿದನು. ಬಲಿಷ್ಠವಾದ ಅವನ ದೇಹದಲ್ಲಿ ವೀರಕಳೆಯು ಸೂಸುತ್ತಿತ್ತು. ಊರವರಲ್ಲಿ ಉಕ್ಕುತ್ತಿದ್ದ ಸಹಜ  ಪ್ರೇಮವು ಅವನನ್ನು ಊರತ್ತ ಸೆಳೆಯಿತು. ಹೆಗ್ಗಡೆಯವರೂ, ಗುರಿಕಾರರೂ ಇತರ ಮುಂದಾಳುಗಳೂ ಅವನನ್ನು ಹಿಂಬಾಲಿಸಿದರು. ಬಲ್ಲಾಳನನ್ನು ಕಾಣುತ್ತಲೇ ಹೊಲಗಳಲ್ಲಿ ಗೆಯ್ಯುತ್ತಿದ್ದ ಕುಡುಬಿಯವರು, ಮರಗೆಲಸಮಾಡುತ್ತಿದ್ದ ಚಪಟೆಕಾರರು, ಮೊಗವೀರರು ಮೊದಲಾದ ಊರ ಹೊಂತಕಾರಿಗಳೆಲ್ಲ ಕತ್ತಿ, ಕೊಡಲಿ, ಸಬಳ, ಬಡಿಗೆಗಳನ್ನು ಹಿಡಿದುಕೊಂಡು ಬಂದು ಸೇರಿದರು.  

                     ಶೆಟ್ಟಿಯು ಅವರನ್ನೆಲ್ಲ ಹುರುಪುಗೊಳಿಸುತ್ತ ನೆಟ್ಟನೆ ಪುಂಡರ ಬಳಿ ಸಾರಿದನು.

              ಅವನ ತುಳಿತಕ್ಕೆ ನೆಲವು ಕುಸಿಯುತ್ತಿತ್ತು. ಆರ್ಭಟಕ್ಕೆ ದಿಕ್ಕುಗಳು ನಡುಗುತ್ತಿದ್ದವು. ಹೊಂತಕಾರಿಗಳ ರಣಗರ್ಜನೆಯಿಂದ ಪುಂಡರ ಗುಂಡಿಗೆಯು ಧಸಕ್ಕೆನ್ನುತ್ತಿತ್ತು.  ಶೆಟ್ಟಿಯು ಕೂರಾದ ಕರವಾಳದಿಂದ ಹಾದಿಯನ್ನು ಬಿಡಿಸಿಕೊಳ್ಳುತ್ತ ಪುಂಡರ ಪಡೆಯ ಬಸಿರೊಳಗೆ ಹೊಕ್ಕನು. ಬಳಸಿ ಬರುವ ಕಟ್ಟಾಳುಗಳನ್ನು ಧೊಕ್ಕನೆ ಕುತ್ತಿ ಕೆಡಹಿದನು. ಎರಡು ದಂಡುಗಳೂ ಕಗ್ಗಾಳ ಕಾಳಗದಲ್ಲಿ ತೊಡರಿಕೊಂಡವು. ಶೆಟ್ಟಿಯ ಅದಟು ಕಂಡು ಪುಂಡರು ದಿಕ್ಕೆಟ್ಟರು. ಅವರಿಗೆ ಬೇಕಾಗಿದ್ದುದು ರತ್ನಾಭರಣದ ಪಣ, ಯುದ್ಧದ ಜಯಾಪಜಯದ ದ್ಯೂತವಲ್ಲ. ಶೆಟ್ಟಿಯನ್ನು ಯುದ್ಧದ ಗಾಳದಲ್ಲಿ ಕೆಡಹಿ ಆಲಿ ರಾಜನು ಮತ್ತು ಆಂಗ್ರಿಯನು ಅಲ್ಪ ದಂಡಿನೊಂದಿಗೆ ಹಿಂಬದಿಯಿಂದ ಹೊರಬಿದ್ದರು. ಸದ್ದಿಲ್ಲದೆ ಮಂಜೇಶ್ವರದ ದೇವಾಲಯದತ್ತ ಸುಳಿದರು. ಸಿಕ್ಕವರನ್ನೆಲ್ಲ ಸಿಕ್ಕಲ್ಲೇ ಒರಸಿಬಿಟ್ಟರು. ಆಲಿ ರಾತ್ರಿ. ದೇಗುಲದೊಳಕ್ಕೆ ನುಗ್ಗಿದನು. ಜನರು ಯಾರೂ ಕಾಣಿಸಲಿಲ್ಲ. ಉರಿಯುತ್ತಿದ್ದ ತೂಗುದೀಪಗಳ ಬೆಳಕಿನಲ್ಲಿ ಜಗಜಗಿಸುವ ರತ್ನಾಭರಣಗಳನ್ನು ಕಂಡನು. ಚಿನ್ನದ ಕಿರೀಟ, ಚಿನ್ನದ ಕಲಶ, ಚಿನ್ನದ ಶೇಷ, ರತ್ನಹಾರ, ಮೋಹನ ಮಾಲೆ ಮೊದಲಾದ ದಿವ್ಯಾಭರಣಗಳನ್ನು ದೋಚಿಕೊಂಡನು. ಸೈನಿಕರು ಸತ್ತಿಗೆ, ದೀಪ, ಗಂಟೆ, ಪಾತ್ರ ಪಡಗಗಳನ್ನೆಲ್ಲ ಹೇರಿದರು. ನಾಲ್ಕು ಸಾವಿರ ಇಕ್ಕೇರಿ ವರಹಗಳ ಬೆಲೆಯ ಒಡವೆ ವಸ್ತುಗಳು ದೊರೆತವು. ಆ ಪುಂಡರಿಗೆ ನೆಂಜಲಿಕ್ಕೆ ಸಿಕ್ಕಿತಲ್ಲದೆ ಮುಕ್ಕಲಿಕ್ಕೇನೂ ಸಿಕ್ಕಲಿಲ್ಲ. ಶೆಟ್ಟಿ ಎಲ್ಲಿ ಬರುವನೋ ಎಂದು ಬೆದರಿ ಲಗುಬಗೆಯಿಂದ ಓಡಿಹೋದರು.

                                           (ನಾಳೆಗೆ ಮುಂದುವರಿಯುವುದು.)



Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries