ಬವರಕ್ಕೆ ಹೋದ ಬಲ್ಲಾಳನು ಹಗಲೆಲ್ಲ ಕೆಚ್ಚಿನಿಂದ ಕಾದಾಡಿ ರಾತ್ರಿ ಮಲಗಿದ್ದನು. ಆ ನಿದ್ದೆಯಲ್ಲಿ ಭೀಕರವಾದ ಕನಸನ್ನು ಕಂಡನು. ಕಿರಾತ ಪಡೆಯು ಚಿಪ್ಪಾರು ಬೀಡನ್ನು ಸುತ್ತಿ ಮುತ್ತಿತ್ತು. ಎಲ್ಲವನ್ನೂ ಕೊಳ್ಳೆಯಿಟ್ಟು ಬೀಡಿಗೆ ಕಿಚ್ಚಿಕ್ಕಿತ್ತು. ದಳ್ಳುರಿಯೆದ್ದು ಏಳಂಕಣವು ನಿರಿನಿಟೆಲೆಂದು ಸುಟ್ಟು ರುಳುತ್ತಿತ್ತು. ನಂದನು ಲಿಂಗಾಯಿಯು ಮಲಗಿದ್ದ ಮಣಿಮಂಚವನ್ನು ಎತ್ತಿಕೊಂಡು ಓಡುತ್ತಿದ್ದನು. ಅವಳು ಆಕಾಶ ಭೂಮಿಯೆಲ್ಲ ಕರಗುವಂತೆ ಮೊರೆಯಿಡುತ್ತಿದ್ದಳು. ಆ ಚೀತ್ಕಾರದಿಂದ ಬಲ್ಲಾಳನು ಹೊಡೆದೆಬ್ಬಿಸಿದಂತೆ ಎಚ್ಚರಗೊಂಡನು.
ಬೆಳಕು ಹರಿಯುವಷ್ಟÀ್ಟರಲ್ಲಿ ರಂಗಯ್ಯ ಬಲ್ಲಾಳನು ಕುದುರೆ ಬೆನ್ನೇರಿ ಮೂರು ದಿನದ ದಾರಿಯನ್ನು ಮೂರು ಜಾವದಲ್ಲಿ ಹಲ್ಲಣಿಸಿ ಬೀಡಿಗೆ ಬಂದನು. ಬಂದವನೆ ಬಿಲದ್ವಾರದ ಬಾಗಿಲನ್ನು ಮೆಟ್ಟಿ ಒಡೆದು ಬಾಗಿಲಿನೆಡೆ ಸಿದುಗುತ್ತಿದ್ದ ನಂದನ ತಲೆಯನ್ನು ಚಂದ್ರಾಯುಧದಿಂದ ಹಾರಿಸಿಬಿಟ್ಟನು.
ಮೇಲುಪ್ಪರಿಗೆಗೆ ಹೋಗಿ ಸುಖವಾಗಿದ್ದ ತಂಗಿಯನ್ನು ಕಂಡು ಸಂತಸಗೊಂಡನು. ಕುದಿಯುತ್ತಿದ್ದ ಲಿಂಗಾಯಿಗೆ ಅಣ್ಣನನ್ನು ಕಂಡು ಅಮೃತಸೇಚನೆಯಾದಂತಾಯಿತು. ಗಿಂಡಿಯಲ್ಲಿ ಹಾಲನ್ನು ತಂದಿಟ್ಟಳು. ತಟ್ಟೆಯಲ್ಲಿ ಹಣ್ಣನ್ನು ಬಿಡಿಸಿಟ್ಟಳು. ರಂಗಯ್ಯನು ಹಾಲನ್ನು ಕುಡಿಯಲಿಲ್ಲ.ಹಣ್ಣನ್ನು ಮುಟ್ಟಲಿಲ್ಲ. ನೆಟ್ಟನೆ ಹೋಗಿ ಮಣಿಮಂಚದ ಮೇಲೆ ಮುಸುಕಿಟ್ಟು ಮಲಗಿಕೊಂಡನು.
ಲಿಂಗಾಯಿ ಲಗುಬಗೆಯಿಂದ ಪಕ್ವಾನ್ನವನ್ನು ಮಾಡಿ ದಣಿದು ಬಂದ ಅಣ್ಣನನ್ನು ಊಟಕ್ಕೆ ಕರೆದಳು. “ಕಾಟಕನಿಂದ ಕನಪು ಬಂದಮೇಲಿನ್ನು ಎಂಥ ಊಟ ತಂಗಿ! ಇನ್ನೆಂಥ ತೀನಿ!” ಎಂದು ಅಣ್ಣನು ಗೊಣಗಿದನು.
ಮರ್ಮವನ್ನು ಹಿಂಡುವ ಈ ಮಾತನ್ನು ಕೇಳಿದಾಕ್ಷಣ ಲಿಂಗಾಯಿಯ ತಲೆಯ ಮೇಲೆ ಕಲ್ಲಿನ ಮಾಡೇ ಕುಸಿದು ಬಿದ್ದಂತಾಯಿತು. ಅವಳು ಎರೆಯಂತೆ ಕರಗಿದಳು. ಮಳಲಂತೆ ಜರೆದಳು. ಆವುಗೆಯ ಕಿಚ್ಚಿನಂತೆ ಸುಳಿಸುಳಿದು ಬೆಂದಳು. ಅಂಜುತ್ತ, ಅಳುಕುತ್ತ ಕಣ್ಣೀರ್ಗೆರೆಯುತ್ತ “ ಅಣ್ಣಾ ಕಾಟಕನು ಬೀಡನ್ನು ಹೊಕ್ಕಿದ್ದನ್ನು ನಾನರಿಯೆನು. ಆ ನೀಚನು ಕೋಟೆಯನ್ನು ಯಾವಾಗ ಹೊಕ್ಕ, ಹೇಗೆ ಹೊಕ್ಕ, ಎಲ್ಲಿ ಅವಿತಿದ್ದ ಎಂಬುದನ್ನೂ ತಿಳಿಯೆನು. ಮನೆ ಉಳ್ಳಾಲ್ತಿಯೇ ಇದಕ್ಕೆ ಸಾಕ್ಷಿ” ಎಂದು ನುಡಿದಳು.
“ನೀನು ಏನೊಂದನ್ನೂ ಅರಿಯದ ಹಸುಬಾಲೆ ನಿಜ.ಆದರೆ ನೀನೊಬ್ಬಳೇ ಇದ್ದ ಬೀಡಿನಲ್ಲಿ ಆ ಜಗಭಂಡ ಹೊಕ್ಕಿದ್ದನೆಂದರೆ ಜನರೇನೆಂದಾರು ತಂಗಿ? ಅಪವಾದಕ್ಕೆ ಕಣ್ಣುಂಟೆ ಅಮ್ಮಣ್ಣಿ?”
“ನನ್ನ ನಿಮಿತ್ತದಿಂದ ಬೀಡಿಗೆ ಕಲಂಕ ಬಂದಿತಾದರೆ ನಾನು ಈ ಹರಣವನ್ನು ಲೆಕ್ಕಿಸುವೆನೇ ಅಣ್ಣಾ? ಒಂದೇ ರಕ್ತವನ್ನು ಹಂಚಿಕೊಂಡು ನಿನ್ನ ಬೆನ್ನಲ್ಲಿ ಬಿದ್ದ ತಂಗಿಯಲ್ಲವೆ ನಾನು? ನಮ್ಮಲ್ಲಿ ಎಡೆಗಟ್ಟುಂಟೆ? ನಾನಿನ್ನು ಉಳ್ಳಾಲ್ತಿಗೆ ಹಾರವಾಗುವೆನು. ಅಣ್ಣಯ್ಯಾ ಅನುಮತಿ ಕೊಡು!”
ಅಣ್ಣನು ತಂದಿದ್ದ ಹೊಸ ಜಾಗಿನ ಸೀರೆ, ಪಟ್ಟೆ ರವಕೆಯನ್ನು ಕೊಟ್ಟನು. ಮುತ್ತು ರತ್ನಾಭರಣಗಳನ್ನಿತ್ತನು. ಲಿಂಗಾಯಿ ಜಳಕ ಮಾಡಿ ಬಂದು ಜಾಗಿನ ಸೀರೆಯನ್ನುಟ್ಟು ಪಟ್ಟೆ ರವಕೆಯನ್ನು ತೊಟ್ಟಳು. ಮುತ್ತು ರತ್ನಾಭರಣಗಳಿಂದ ಸಿಂಗರಿಸಿಕೊಂಡಳು.ಅರಳು ಮಲ್ಲಿಗೆಯನ್ನು ಮುಡಿದಳು. ಪತ್ಥಳಿ ಗೊಂಬೆಯಂತೆಸೆದಳು. ಕುಲ ದೈವವಾದ ಉಳ್ಳಾಲ್ತಿಯನ್ನು ಧ್ಯಾನಿಸುತ್ತ ಮೈಮರೆತಳು. "ತಂಗಿ ನಿನ್ನೆ ಸತ್ಯವು ನಿನ್ನನ್ನು ಕಾಪಾಡಲಿ. ತಾಯಿ ಉಳ್ಳಾಲ್ತಿಯು ಕೈಗಾಯಲಿ!”ಎಂದು ಸಿಂಗರದ ಒಂದು ಕಲಂಬಿಯಲ್ಲಿ ತಂಗಿಯನ್ನು ಕುಳ್ಳಿರಿಸಿ ಬಾಗಿಲಿಕ್ಕಿ ಕಳಾಯಿ ಮಡುವಿಗೆಸೆದುಬಿಟ್ಟನು.
(ನಾಳೆಗೆ ಮುಂದುವರಿಯುವುದು.)