HEALTH TIPS

‘ಮಂಜೇಶ್ವರದ ಮುತ್ತಿಗೆ’: ಬೇಕಲ ರಾಮನಾಯಕರು ಬರೆದ ಐತಿಹಾಸಿಕ ಕಥೆ:ಃ ಭಾಗ: 03

                     ಮಂಜೇಶ್ವರ ದೇವಸ್ಥಾನದಿಂದ ಹೇಗಾದರೂ ಪಾರಾಗಿ ಆಲಿ ರಾಜನೂ ಅಂಗ್ರಿಯನೂ ದಂಡಿನೊಂದಿಗೆ ಉದ್ಯಾವರಕ್ಕೆ ಬಂದರು. ಉದ್ಯಾವರದಲ್ಲಿ ಮಮ್ಮಿ ಸೂಫಿ ಬ್ಯಾರಿಯು ಹೆಸರು ವಾಸಿಯಾದ ಒಬ್ಬ ದೊಡ್ಡ ಸಾಹುಕಾರ. ವಿದೇಶಗಳೊಡನೆ ಏಲಕ್ಕಿ, ಕರಿಮೆಣಸು, ಅಡಿಕೆ, ಬಟ್ಟೆ, ಅಕ್ಕಿ, ಮೊದಲಾದುವನ್ನು ವ್ಯಾಪಾರ ಮಾಡಿ ಧಾರಾಳ ಲಾಭ ಪಡೆಯುತ್ತಿದ್ದನು. ತುಳುನಾಡ ಮಂಗಳೂರು, ಭಟ್ಕಳ, ಹೊನ್ನಾವರ ಮೊದಲಾದ ರೇವುಗಳಲ್ಲಿ ಅವನಿಗೆ ಭಂಡಾಸಾಲೆಗಳಿದ್ದವು. ಹಲವು ಮಂಜಿಗಳೂ ಇದ್ದವು. ದೂರದಲ್ಲಿ ಅವನ ಮಹಡಿಮನೆಯು ಕಾಣಿಸಿತು. ಹಲವು ಮಂದಿ ಆಳು, ಮಕ್ಕಳು ಓಡಾಡುತ್ತಿದ್ದರು. ಬಾಗಿಲಲ್ಲಿ ಬಣ್ಣದ ಗೂಡುಗಳಲ್ಲಿ ಗಿಳಿ ಮೊದಲಾದ ವಿಚಿತ್ರಪಕ್ಷಿಗಳಿದ್ದವು. ಒಳಗಿನ ಹಜಾರದಲ್ಲಿ ಬೆಲೆಬಾಳುವ ಜಮಖಾನಗಳು ಹರಡಿದ್ದವು. ಅವುಗಳ ಮೇಲೆ ತಿವಾಸಿಯ ದಿಂಬು ಇರಿಸಲ್ಪಟ್ಟಿದ್ದವು. ಒಂದು ಜಮಖಾನೆಯಲ್ಲಿ ಸೂಫಿಯು ದಿಂಬಿನ ಮೇಲೆ ಒರಗಿದ್ದನು. ನುಣ್ಣನೆಯ ತಲೆಗೊಂದು ಟೊಪ್ಪಿಯನ್ನು ಇಟ್ಟು ನಡುವಿನ ಕೆಳಗೆ ಚೀನದ ಒಂದು ಲುಂಗಿಯನ್ನು ಉಟ್ಟು ಬೆಳ್ಳಿ ಜರಿಯಂಥ ಗಡ್ಡದ ಮೇಲೆ ಕೈ ಆಡಿಸುತ್ತಿದ್ದನು. ಬೆಳ್ಳಗಿನ ಅವನ ಸ್ಥೂಲ ಕಾಯದಲ್ಲಿ ಉಲ್ಲಾಸ ತುಂಬಿತ್ತು.

                    ಅಲಿರಾಜನು ಇದಿರಾದವರನ್ನು ತರಿದು ಚೆಲ್ಲಿದನು. ರಕ್ತ ಕಾರುವ ಅವನ ಕತ್ತಿಯನ್ನು ಕಂಡೊಡನೆ ಸೂಫಿಯು ಅಲ್ಲಾ ! ಪರ್ವರ್ದಿಗಾರ್! ಎಂದು ಬೊಬ್ಬಿರಿದನು. ತೆರೆದ ಬಾಯಿ ತೆರೆದಂತ್ತಿತ್ತು. ಕನ್ನೊಜಿಯು ಆನನನ್ನು ಹಿಡಿದು ಕಂಬಕ್ಕೆ ಕಟ್ಟಿದನು. ಮನೆಯೆಲ್ಲ ಬೊಬ್ಬೆಯೇ ಬೊಬ್ಬೆ. ಅಲಿರಾಜನು ಬೊಕ್ಕಸದ ಬೀಗದ ಕೈ ಕೇಳಿದನು. ಸೂಫಿಯು ಭಯದಿಂದ ನಡುಗುತ್ತ ಏನು ಬೇಕಾದರೂ ಕೊಡುತ್ತೇನೆ. ನವಾಬ್! ಡೊಕ್ಕೆಯೊಂದನ್ನು ಉಳಿಸಿದರೆ ಸಾಕೆಂದು ಬೇಡಿಕೊಂಡ. ಆಲಿ ರಾಜನು ಬೊಕ್ಕಸವನ್ನು ತೆರೆದನು. ಅದರಲ್ಲಿ ಹತ್ತು ಲಕ್ಷ ಇಕ್ಕೇರಿ ವರಹಗಳಿದ್ದವು. ಸೈನಿಕರು ಜನಾನಾವನ್ನು ಮುತ್ತಿದರು. ನೆರಳಲ್ಲಿ ಬೆಳೆದು ಬೆಳುಗೆಂಪಾದ ವಿಲಾಸವತಿಯರು ಚಿನ್ನಾಭರಣಗಳ ಭಾರಕ್ಕೆ ಬಳುಕುತ್ತ ಗೋಳಾಡುತ್ತಿದ್ದರು. ಆಲಿ ರಾಜನು ಆ ಚಿನ್ನಾಭರಣಗಳನ್ನೆಲ್ಲ ಕಸಿದುಕೊಂಡನು. ಅವನ ಸೈನಿಕರು ಎಷ್ಟೋ ಒಡವೆ ವಸ್ತುಗಳನ್ನು ಅಪಹರಿಸಿದರು. ಸೂಫಿಯ ಬೇಗಮುಗಳಲ್ಲಿ ಒಬ್ಬಳನ್ನು ತನ್ನ ಜನಾನಾಕ್ಕೆ ಸೇರಿಸಿಕೊಂಡನು.


                       ತ್ಯಾಮಪ್ಪ ಶೆಟ್ಟಿಯು ಜಯಶಾಲಿಯಾಗಿ ತನ್ನ ಬೀಡಿಗೆ ಮರಳಿದನು. ಮೊಕ್ತೇಸರರು ಹೆಚ್ಚಿನ ರತ್ನಾಭರಣಗಳನ್ನು ಬಚ್ಚಿಟ್ಟು ವಿದ್ರೋಹಿಗಳ ಕಣ್ಣಿಗೆ ಮಣ್ಣೆರಚಲು ಕೆಲವು ಅಮೂಲ್ಯ ವಸ್ತು ಗಳನ್ನು ಮಾತ್ರ ಗರ್ಭಗುಡಿಯಲ್ಲಿರಿಸಿದ್ದರು. ಅದನ್ನು ಕೇಳಿ ಶೆಟ್ಟಿಯು, ಕಣ್ಣು ತಪ್ಪಿಸಿಕೊಂದು ಬಂದು ಅಷ್ಟು ದ್ರವ್ಯವನ್ನು ದಕ್ಕಿಸಿಕೊಂಡರೇ ಎಂದು ಉದ್ಗರಿಸಿದರು.

                     ಪುಂಡುಗಾರರು ಮಂಜೇಶ್ವರದಿಂದ ಕೊಲ್ಲೂರಿಗೆ ಹೋಗುವ ಸೋವು ಹರಡಿತ್ತು. ಆ ಕ್ಷೇತ್ರವನ್ನೂ ರಕ್ಷಿಸುವುದಕ್ಕೆ ಶೆಟ್ಟಿಯು ತತ್ಪರನಾಗಿದ್ದನು. ರಾತ್ರೋರಾತ್ರಿ ಕುದುರೆಯನ್ನೇರಿಕೊಂಡು ಕೊಲ್ಲೂರಿಗೆ ಹೋಗಿ ದೇವಸ್ಥಾನದ ಅರ್ಚಕರು ಮೊತ್ತೇಸರರಿಗೆಲ್ಲ ಈ ಭೀಕರ ವಾರ್ತೆಯನ್ನು ತಿಳಿಸಿದನು. ಎಲ್ಲರೂ ಹೌಹಾರಿದರು. ಶ್ರೀ ದೇವಿಯ ಪ್ರಸಾದವನ್ನು ಅರಮನೆಗೆ ಮುಟ್ಟಿಸುವುದಕ್ಕಾಗಿ ಕುದುರೆ ಸವಾರನೊಬ್ಬನು ನಿತ್ಯವೂ ಬರುವ ಕಟ್ಟಳೆಯಿತ್ತು. ಮರುದಿನ ಪೂಜೆಯ ವೇಳೆಗೆ ಅವನೂ ಬಂದಿದ್ದನು.ಅವನೊಡನೆ ಹಿರಿಯ ಮೊಕ್ತೇಸರನೂ, ಶೆಟ್ಟಿಯೂ, ಮಹಾರಾಣಿಯ ಭೇಟಿಗೆ ಹೊರಟರು. ರಾಣಿ ವೀರಮ್ಮಾಜಿಯು ಅವರನ್ನು ಪ್ರೀತಿಯಿಂದ ಆದರಿಸಿ, ಬಂದ ವಿಚಾರವೇನೆಮದು ಕೇಳಿದಳು. ಆಗ ಶೆಟ್ಟಿಯು ಕೈಜೋಡಿಸಿಕೊಂಡು ಕಣ್ಣಾನೂರಿನ ಸುಲ್ತಾನ್ ಆಲಿರಾಜನೂ ಮರಾಟಯ ಕನ್ನೀಜಿ ಅಂಗ್ರಿಯೂ ಮಂಜೇಶ್ವರವನ್ನು ಸುಲಿಗೆ ಮಾಡಿದ ಸಂಗತಿಯನ್ನು ಅರಿಕೆಮಾಡಿಕೊಂಡನು. ಈಗ ಆ ಲೂಟಿಗಾರರು ಕೊಲ್ಲೂರಿಗೆ ಬರುತ್ತಿರುವ ಸುದ್ದಿಯನ್ನೂ ಬಿನ್ನವಿಸಿಕೊಂಡನು. ಇದನನು ಕೇಳುತ್ತಿದ್ದಂತೆ ಧರ್ಮ ನಿಷ್ಠಳಾದ ವೀರಮ್ಮಾಜಿಯ ಹುಬ್ಬು ಗಂಟಿಕ್ಕಿತು.  

                                                         (ನಾಳೆಗೆ ಮುಂದುವರಿಯುವುದು.)



Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries