HEALTH TIPS

ಬೇಕಲ ರಾಮನಾಯಕರು ಬರೆದ ಐತಿಹಾಸಿಕ ಕಥೆ: ಬಲ್ಲಾಳ ಕುವರಿ: ಭಾಗ: 04


                ಕಳಾಯಿ ಹೊಳೆಯಲ್ಲಿ ಆಗಸನೊಬ್ಬನು ಬಟ್ಟೆ ಒಗೆಯುತ್ತಿದ್ದನು. ಕಲಂಬಿಯು ತೇಲುತ್ತ ಅಲ್ಲಿಗೆ ಬಂತು. “ಎಲೋ ಅಗಸ ! ಏನು ತೆಗಲೆಯ ಸೊಕ್ಕೋ ? ನೆತ್ತರಿನ ಕೊಬ್ಬೋ? ಮೈಗೆ ಮೈಲಿಗೆ ನೀರು ಹಾರಿಸುತ್ತೀಯಾ ?” ಎಂದು ಕಲಂಬಿಯೊಳಗಿನಿಂದ ಒಂದು ಕ್ಷೀಣ ದನಿಯು ಕೇಳಿಸಿತು. ಅಗಸನು ಆ ಧ್ವನಿಯನ್ನು ಕೇಳಿ ಬೆರಗಾದನು. “ಇದೆಂಥ ಕಲಂಬಿಯಪ್ಪ ! ಒಳಗೆ ಯಾರೋ ಇರಬೇಕು. ಇದನ್ನು ಹೀಗೆಯೇ ಬಿಟ್ಟರೆ ರಾಜದಂಡನೆಗೆ ಗುರಿಯಾಗಬೇಕಾದೀತು” ಎಂದು ಅದನ್ನು ಹೊತ್ತುಕೊಂಡು ಯಿಟ್ಟಲರಮನೆಗೆ ಹೋದನು. ಅರಸನ ಮುಂದೆ ಅದನ್ನಿಟ್ಟು, ಅಡ್ಡ ಬಿದ್ದು “ಮಡುವಿನಲ್ಲಿ ವಸ್ತ್ರ ಒಗೆಯುತ್ತಿದ್ದಾಗ ಈ ಕಲಂಬಿ ತೇಲಿ ಬರುತ್ತಿತ್ತು. ಒಳಗೆ ಯಾರದೋ ದನಿ ಕೇಳಿಸುತ್ತದೆ. ಏನೋ ಚೋದ್ಯವಿರಬೇಕು ಒಡ್ಯಾ” ಎಂದು ಅರಿಕೆಮಾಡಿಕೊಂಡನು.

              ಅರಸನು ಔತ್ಸುಕ್ಯದಿಂದ ಕಲಂಬಿಯ ಬಾಗಿಲನ್ನು ತೆರೆಸಿದನು. ಸವಿ ಕುಂದದ, ಬಣ್ಣ ಕಂದದ, ಲಿಂಗಾಯಿ ಕಣ್ಣೆಸೆದಳು. ಮುತ್ತು ರತ್ನ ರಂಜಿತೆಯಾದ, ಚೆಲುವಿಂಗೆ ಚೆಲುವಳಾದ ಆ ಬಲ್ಲಾಳ ಕುವರಿಯು ತೋರಣದೆಲೆಯಂತೆ ನಡುಗುತ್ತ, ದುಂಡ ಮುತ್ತಿನಂತೆ ಬೆವರುತ್ತ ಲಜ್ಜೆಯಿಂದ ಅಲ್ಲೇ ಮುದುರಿಕೊಂಡಳು.

                ಅರಸನೊಮ್ಮೆ ಅವಳನ್ನು ಕಣ್ತುಂಬ ನೋಡಿ ಮನದಲ್ಲಿ ತುಂಬಿಕೊಂಡನು. ಅಷ್ಟರಲ್ಲಿ ಅರಮನೆಯ ದಾಸಿಯರು, ಗೌಡಿಯರೆಲ್ಲ ಬಂದು ಅವಳನ್ನು ಉಪಚರಿಸತೊಡಗಿದರು. ಅರಸನು ರಂಗಯ್ಯ ಬಲ್ಲಾಳನನ್ನು ಕೂಡಲೆ ಕರೆಸಿ ಸಂಗತಿಯನ್ನೆಲ್ಲ ವಿಚಾರಿಸಿದನು.

              ರ0ಗಯ್ಯನು ಕಂಬನಿಗರೆಯುತ್ತ “ಬೀಡಿನ ಶುಭ್ರಕೀರ್ತಿಗೆ ಅಪವಾದ ತಟ್ಟಿತೆಂಬ ಭೀತಿಯು ಹೀಗೆ ಪ್ರೇರಿಸಿತು ಮಹಾ ಪ್ರಭು ! ಈಗವಳ ಸತ್ಯ ಪರೀಕ್ಷೆಯಾಯಿತು. ಮಡುವಿಗೆಸೆದ ಬಾಲೆಯು ಬಣ್ಣಗೆಡದೆ ಬದುಕಿ ಬ0ದಳು” ಎಂದು ಉದ್ಧರಿಸಿದನು.

             “ಬಲ್ಲಾಳರೇ ! ಆ ಪುಂಡನು ಸೊಕ್ಕಿ ಜಂತ್ರದ ಪೆರ್ಗದದೊಡನೆ ಸೆಣಸಿ ಅವನ ಕರ್ಮಫಲವನ್ನು ಜಿನ ಉಂಡನು. ಇದರಲ್ಲಿ ಬೀಡಿಗೆ ಅಪವಾದವೆಲ್ಲಿಯದು ? ಏನೊಂದನ್ನೂ ಅರಿಯದ ಈ ಮುಗ್ಗೆಯು ಉಳ್ಳಾಲ್ತಿಗೆ ಹಾರವಾಗಿ ಬೀಡಿನ ಕೀರ್ತಿಯನ್ನು ಬೆಳಗಿದಳು. ನೀವಿನ್ನು ನಿಮ್ಮ ಮನದ ಅಳಲನ್ನು ಬಿಟ್ಟು ಸುಖವಾಗಿರಿ. ಕುವರಿಯನ್ನು ನಾನು ವರಿಸುವೆನು” ಎಂದನು.

                ಅರಸನ ಮಾತನ್ನು ಕೇಳಿ ರಂಗಯ್ಯನ ರೋಮ ರೋಮದಲ್ಲಿಯೂ ಆನಂದವು ಉಕ್ಕೇರಿ ಗೆಲವಿನ ಗಾಡಿಗಳೆಂಬಂತೆ ನವಿರೆದ್ದು ನಿಂತಿತು. ಗುಂಡಿಗೆಸೆದ ಕುವರಿಯನ್ನು ಪಾವನಗೊಳಿಸಿದ ಅರಸನ ಔದಾರ್ಯಕ್ಕೆ ಅತೀವ ಧನ್ಯನಾದನು. ಬಲ್ಲಾಳ ಕುವರಿ ಮತ್ತು ಯಿಟ್ಟಲ ಹೆಗ್ಗಡೆಯ ವಿವಾಹ ಮಹೋತ್ಸವವು ಅತ್ಯಂತ ವೈಭವದಿಂದ ನೆರವೇರಿತು. ಸೀಮೆಯ ಸಾವಿರದೈನೂರು ಆಳು ಸಂತಸದಲ್ಲಿ ನಲಿಯಿತು.

                                        -ಮುಗಿಯಿತು-

                  ಈ ಕಥೆಯ ಬಗೆಗಿನ ಆದಾರ, ಅಭಿಪ್ರಾಯಗಳಿಗೆ ಮುಕ್ತ ಸ್ವಾಗತ.

               ನಾಳೆಯಿಂದ ಬೇಕಲ ರಾಮ ನಾಯಕರು ಬರೆದ ಇನ್ನೊಂದು ಕಥೆ 

                      “ಕುಂಬಳೆಯ ಜಯಸಿಂಹ ರಾಜ”

                                           ನಿರೀಕ್ಷಿಸಿ.



Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries