ಆಲಿರಾಜನೂ ಆಂಗ್ರಿಯನೂ ಉಳಿದ ಸೈನ್ಯದೊಂದಿಗೆ ಕೊಲ್ಲೂರಿಗೆ ಬಂದರು. ದೂರದಲ್ಲಿ ರಣಭೇರಿಯು ಕೇಳುತ್ತಿದ್ದಿತು. ಮತ್ತೊಂದು ಕ್ಷಣದಲ್ಲಿ ಲೂಟಿಗಾರರು ರಣಗರ್ಜನೆ ಮಾಡುತ್ತ ದೈವಾಗಾರವನ್ನು ಮುತ್ತಿದರು. ಇದಿರಾದವರೆಲ್ಲ ಅವರ ಬಿಚ್ಚುಗತ್ತಿಗೆ ಬಲಿಯಾದರು. ಆಲಿಯೂ ಆಂಗ್ರಿಯನೂ ಪವಿತ್ರವಾದ ಗರ್ಭಗುಡಿಯನ್ನು ಹೊಕ್ಕರು. ನಂದಾದೀಪದ ದಿವ್ಯ ಜ್ಯೋತಿಯಲ್ಲಿ ದೇವಿಯ ವಜ್ರ ಕಿರೀಟ ರತ್ನ ಕವಚ, ಕುಂಡಲ ಹಾರಾದಿ ಹದಿನಾರುಲಕ್ಷ ಮೌಲ್ಯದ ಅನಘ್ರ್ಯ ಆಭರಣಗಳನ್ನು ಸೂರೆ ಮಾಡಿದರು. ಎಷ್ಟು ಹುಡುಕಿದರೂ ಅಂಗೈ ಹರದ ಪಚ್ಚೆ ಮಣಿ ದೊರೆಯಲಿಲ್ಲ. ಅದನ್ನು ಅಡಗಿಸಿಬಿಟ್ಟರೆಂಬ ಸೇಡಿನಿಂಡ ಊರೊಳಗೆ ಢಕಾಯಿತೆಗೆ ಲಗ್ಗೆ ಇಡಲಾರಂಭಿಸಿದರು.
ರಾಣಿ ವೀರಮ್ಮಾಜಿಯು ಕೋಪಾವಿಷ್ಟಳಾಗಿ ಆಲಿರಾಜನಿಗೆ ತನ್ನರಾಜ್ಯದಿಂದ ಕಳುಹಿಸುತ್ತಿದ್ದ ಅಕ್ಕಿಯನ್ನು ಇನ್ನು ಮುಂದೆ ಕಳುಹಿಸಕೂಡದಂದು ಅಪ್ಪಣೆ ಮಾಡಿದಳು. ಅವನ ಹಡಗುಗಳನ್ನು ಕಂಡಲ್ಲಿ ಹಿಡಿದು ವಶಪಡಿಸಿಕೊಳ್ಳುವಂತೆ ಭಟ್ಕಳದ ತನ್ನ ನೌಕಾಪಡೆಗೆ ಆಜ್ಞೆಯನ್ನಿತ್ತಳು. ಕೊಲ್ಲೂರ ರಕ್ಷಣೆಗಾಗಿ ಒಂದು ಸಮರ್ಥರಾಹುತ ದಳವನ್ನು ಬಲ್ಲಾಳನೊಂದಿಗೆ ಕಳುಹಿಸಿಕೊಟ್ಟಳು.
ತ್ವರಿತ ಗತಿಯಿಂದ ಬರುತ್ತಿದ್ದ ರಾಹುತ ದಳವನ್ನು ಕಂಡು ಊರಿಗೆ ಕೊಳ್ಳಿಯಿಡುತ್ತಿದ್ದ ಕೊಳ್ಳೆಗಾರರು ದಿಕ್ಕಾಪಾಲಾಗಿ ಒಡಿ ಹೋದರು. ತಾವು ಬರುವಷ್ಟರಲ್ಲಿ ಕ್ಷೇತ್ರವು ಕೊಳ್ಳೆಯಾಗಿ ಹೋದುದಕ್ಕಾಗಿ ಎಲ್ಲರೂ ದುಃಖಿಸಿದರು.
ಹೇಗೂ ಪುಂಡುಗಾರರನ್ನು ಊರಿಂದೋಡಿಸಿದ ತ್ಯಾಮಪ್ಪ ಶೆಟ್ಟಿಯ ಶೌರ್ಯ ಸಾಹಸ ಗಳನ್ನು ಜನರು ಇಂದಿಗೂ ಕತೆ ಕಟ್ಟಿ ಹೇಳುತ್ತಿರುವರು.
(ಮುಗಿಯಿತು.)