ಹೀಗಿರಲು ಒಂದು ದಿನ ಮಲೆನಾಡಿನ ಪ್ರಜೆಗಳು ಕಾಡು ಮೃಗಗಳ ಪೀಡೆಯನ್ನು ತಾಳಲಾರದೆ ಕಂಗೆಟ್ಟು ರಾಣಿಯ ಬಳಿಗೆ ಬಂದು ಮೊರೆಯಿಟ್ಟರು. ಇದನ್ನು ಕೇಳಿ ಜಯಸಿಂಹನು ಬೇಟೆಗಾರರ ಪಡೆಯೊಂದಿಗೆ ಅರಣ್ಯವನ್ನು ಹೊಕ್ಕು ಮೃಗಗಳನ್ನು ಎಬ್ಬಿಸಿದನು. ಅವನ ಉರುಬೆಗೆ ತೋಳ, ಚಿರತೆಗಳು ಬೆದರಿದುವು. ಕರಡಿಗಳು ಹುದುಗಿದವು. ಕಾಡುಕೋಣಗಳು ಬೆದರಿದುವು. ಬೇಟೆಗಾರರು ಮೃಗಗಳ ತೊಗಲನ್ನು ಬಿಚ್ಚಿ ಎಲುಬನ್ನು ಕೊಚ್ಚಿ ಗುಡುಗುತ್ತ ಜಿಗಿಯುತ್ತ ತರುಬಿದರು.
ಹೀಗೆ ಮುಂದೊತ್ತಿ ಮುಂದೆ ಮುಂದೆ ಸಾಗಿ ಜಯಸಿಂಹನು ಪಯಸ್ವಿನಿಯ ಉಗಮ ಸ್ಥಾನಕ್ಕೆ ಬಂದನು. ಬೇಟೆಗಾರರ ಉರುಬನ್ನು ಕಂಡು ಕೆಲವು ಮೃಗಗಳು ಹೆದರಿ ಅರೆಚುತ್ತ ಅಲ್ಲಲ್ಲೆ ಅವಿತುಕೊಂಡುವು. ಜಯಸಿಂಹನು ಚಿನ್ನದ ಗರಿಯುಳ್ಳ ಕೂರಂಬನ್ನು ಹೆದೆಯೇರಿಸಿ ಬಿಟ್ಟನು. ಆ ಬಾಣವು ಹೊಗೆಯನ್ನು ಕಾರುತ್ತ ವೇಗದಿಂದ ಹೋಗಿ ಧ್ಯಾನಮಗ್ನನಾಗಿದ್ದ ಉದ್ದಾಲಕನೆಂಬ ಋಷಿಯ ತಲೆಯನ್ನು ಹಾರಿಸಿತು. ಅದನ್ನು ಕಂಡು ಅವನ ಪತ್ನಿಯು ದುಃಖಾಕ್ರಾಂತಳಾಗಿ ಕೋಪÀಗೊಂಡು ಶಾಪವÀನ್ನಿತ್ತಳು.
ಜಯಸಿಂಹನು ತನ್ನ ಪ್ರಮಾದಕ್ಕಾಗಿ ಪಶ್ಚಾತ್ತಾಪಪಟ್ಟು ಅವಳ ಕಾಲಿಗೆರಗಿ ಕ್ಷಮೆಯನ್ನು ಬೇಡಿಕೊಂಡನು, ಆದರೆ ಅವಳಿಗೆ ಕರುಣೆ ಹುಟ್ಟಲಿಲ್ಲ. ಬಳಿಕ ಜಯಸಿಂಹನು ಅಲ್ಲೇ ಧಾರಾನದಿಯ ತೀರದಲ್ಲಿ ಚಿತೆಯನ್ನೇರ್ಪಡಿಸಿ ಋಷಿಯ ಉತ್ತರ ಕ್ರಿಯೆ ನೆರವೇರಿಸಿದನು. ಪತಿವ್ರತೆಯಾದ ಆ ಪತ್ನಿಯು ಪತಿಯ ಚಿತೆಯಲ್ಲಿ ಬಿದ್ದು ಪ್ರಾಣಬಿಟ್ಟಳು. ಜಯಸಿಂಹನು ಬೇಟೆಯನ್ನು ಮುಗಿಸಿ ಅರಮನೆಗೆ ಬಂದು ನಡೆದ ಸಂಗತಿಯನ್ನೆಲ್ಲ ತಾಯಿಗೆ ತಿಳಿಸಿ ಹರಿಣಿಯಂತೆ ಕಣ್ಣೀರು ಹರಿಸಿದನು.
ಬಳಿಕ ಗುರುಹಿರಿಯರ ಸಲಹೆಯಂತೆ ಮುನಿ ಪತ್ನಿಯ ಶಾಪ ವಿಮೋಚನೆಗಾಗಿ ಜಯಸಿಂಹನು ತಪಸ್ಸಿಗೆ ಹೋಗಲು ಸಿದ್ಧನಾದನು. ಪೂರ್ವಾಭಿಮುಖವಾಗಿ ನಡೆದು ಮೂರು ದಿನಗಳಲ್ಲಿ ಕಾವೇರಿ ನದೀತೀರಕ್ಕೆ ಬಂದು ಮುಟ್ಟಿದನು. ಅಲ್ಲಿಯ ತೀರ್ಥದಲ್ಲಿ ಮಿಂದು ಅಗಸ್ಯರಿಗೆರಗಿ ವ್ಯಾಘ್ರಪಾದ ಕ್ಷೇತ್ರದಲ್ಲಿ ಶ್ರೀರಾಮನಿಂದ ಪ್ರತಿಷ್ಠಿತವಾದ ಚಂದ್ರಮೌಳೀ ಶ್ವರನ ಸನ್ನಿಧಿಗೆ ಬಂದನು. ಅಲ್ಲಿಯ ಪಕ್ಷಿಗಳು ಆ ಕ್ಷೇತ್ರ ಮಹಿಮಯನ್ನು ವರ್ಣಿಸುತ್ತಿದ್ದುವು. ಪಕ್ಷಿ ಭಾಷೆಯನ್ನು ಬಲ್ಲ ಜಯಸೀಹನು ಅದನ್ನೆಲ್ಲ ಅರಿತುಕೊಂಡು ತದೇಕ ಧ್ಯಾನದಿಂದ ಚಂದ್ರಮೌಳೀಶ್ವರನಲ್ಲಿ ತಪೆÇೀಮಗ್ನನಾದನು.
ಹೀಗೆ ಮೂರು ತಿಂಗಳ ಪರ್ಯಂತ ತಪಸ್ಸನ್ನಾಚರಿಸುತ್ತಿರಲು ಚಂದ್ರಮೌಳೀಶ್ವರನು ಪ್ರತ್ಯಕ್ಷನಾದನು. “ಇನ್ನು ಕೆಲವು ದಿನಗಳಲ್ಲಿ ಗೋಕರ್ಣಕ್ಕೆ ಹೋಗುವ ನಾಲ್ಕು ಮಂದಿ ಬ್ರಾಹ್ಮಣರು ನಿನಗೆ ದೊರೆಯುವರು. ಅವರಿಂದ ನಿನ್ನ ಇಷ್ಟಾರ್ಥವು ನೆರವೇರುವುದು” ಎಂದು ಹೇಳಿ ಅದೃಶ್ಯನಾದನು.
ಬಳಿಕ ಜಯಸಿಂಹನು ಅರಮನೆಗೆ ಬಂದು ಚಂದ್ರಮೌರೀಶ್ವರನು ಒಲಿದ ಸಂಗತಿಯನ್ನೂ ಬ್ರಾಹ್ಮಣರ ಆಗಮನದ ಸಂಗತಿಯನ್ನೂ ತಾಯಿಗೆ ತಿಳಿಸಿದನು. ಅವಳು ಅದನ್ನು ಕೇಳಿ ಸಂತುಷ್ಟಳಾದಳು.
ಆ ವೇಳೆಗೆ ಮಂಜುಳಾಪುರದ ಪಟ್ಟದಮೊಗರು ಎಂಬಲ್ಲಿ ಚಂಡಾಲಕನೂ ಚೋರ ಮುಖ್ಯನೂ ಸಹಸ್ರ ಕಿರಾತ ಪ್ರಜೆಗಳುಳ್ಳವನೂ ಆದ ಮುಗರಾಖ್ಯನು ಪ್ರಬಲಿಸುತ್ತಾ ಬರುತ್ತಿದ್ದನು. ಅವನೊಡನೆ ಬಡಾಜೆಯಲ್ಲಿದ್ದ ಅವನ ಭಾವನೆಂಟನಾದ ಒಡಜನೆಂಬುವನೂ ಸೇರಿದ್ದನು.
ಸುರಾ ಮಾಂಸ ಸೇವಕರೂ ಮಹಾ ಕ್ರೂರಿಗಳೂ ಆದ ಇವರು ಅಲ್ಲಲ್ಲಿ ಕೋಟೆ ಕೊತ್ತಳಗಳನ್ನು ಕಟ್ಟಿಸಿ ಕಿರಾತರ ಕಾವಲಿಟ್ಟರು. ಮಠ ಗೋಪುರಗಳಲ್ಲಿ ಮಾಂಸಖಂಡಗಳನ್ನು ತೂರಿ ಯಜ್ಞಶಾಲೆಗಳಲ್ಲಿ ರಕ್ತವನ್ನು ಚೆಲ್ಲಿ ಹೊಲೆಗೈಯ್ಯುತ್ತಿದ್ದರು. ಹೋಮನೇಮಗಳನ್ನು ಕೆಡಿಸುತ್ತಿದ್ದರು. ಪ್ರಜೆಗಳೆಲ್ಲರೂ ಪೀಡಿತರಾದರು. ಮೂವತ್ತೆರಡು ಗ್ರಾಮಗಳಿಂದ ಕೂಡಿದ ತೌಳವ ದೇಶವು ಕಷ್ಟಕ್ಕೆ ಗುರಿಯಾಯಿತು.
ಈ ದುಷ್ಟರನ್ನು ಹತ್ತಿಕ್ಕುವುದಕ್ಕೆ ಜಯಸಿಂಹನು ಸಜ್ಜಾದನು, ಒಂದು ದಿನ ಅವನು ರಾಜ್ಯದಲ್ಲಿ ಸಂಚರಿಸುತ್ತಿದ್ದಾಗ ಗ್ರಂಥಗಳನ್ನು ಹೊತ್ತುಕೊ ಅನೇಕ ಶಿಷ್ಯರೊಂದಿಗೆ ಗೋಕರ್ಣಕ್ಕೆ ಹೋಗುತ್ತಿದ್ದ. ನಾಲ್ಕು ಮಂದಿ ಬ್ರಾಹ್ಮಣರನ್ನು ಕಂಡನು. ಆಗ ಜಯಸಿಂಹನು ಚಂದ್ರಮೌಳೇಶ್ವರನ ಕೃಪೆಯನ್ನು ನೆನೆದು ಬ್ರಾಹ್ಮಣರ ಪಾದಕ್ಕೆರಗಿದನು. ಆಗ ಅವರಲ್ಲಿ ಹಿರಿಯನಾದ ಶಂಕರನೆಂಬ ಬ್ರಾಹ್ಮಣನು “ಎಲೆ ನೃಪ ಶಾರ್ದೂಲ, ನಾವು ನಿನ್ನ ಹಿತವನ್ನು ಮಾಡುವೆವು. ಋಷಿಪತ್ನಿಯ ಶಾಪದಿಂದ ಬಂದ ದೋಷಗಳನ್ನು ನಿವಾರಿಸುವೆವು” ಎಂದನು. ಅರಸನು, "ಧನ್ಯ! ಕೃತಾರ್ಥ”ನೆನ್ನಲು ಎಲ್ಲರೂ ವೇಲಾಪುರ ಕ್ಷೇತ್ರಕ್ಕೆ ಬಂದರು. ಶಂಕರನು ನಿರಾಹಾರನಾಗಿ ಕಠಿಣವಾದ ತಪಸ್ಸಿನಿಂದ ಏಳು ದಿನಗಳ ವರೆಗೆ ಆಗಮ ವಿಧಿಯನ್ನಾಚರಿಸಿ ಹತಪ್ರಭವಾಗಿದ್ದ ಮಹಿಷಾಸುರ ಮರ್ಧಿನಿಯನ್ನು ಪುನಃ ಪ್ರತಿಷ್ಠಾಪಿಸಿದನು.
ಬಳಿಕ ರಿಪುನಾಶಕ್ಕಾಗಿ ಮಾರಣಹೋನು ಮಾಡಿದನು. ಆ ಹೋಮಧೂಮದಿಂದ ದುರುದುಂಬಿಗಳು ಎದ್ದುವು. ಪ್ರಜಾ ಕಂಟಕರಾದ ಚಂಡಾಲರನ್ನು ಅಟ್ಟಿಕೊಂಡು ಹಾರಾಡತೊಡಗಿದವು.
ದುಷ್ಟ ನಾಶಕ್ಕೆ ಇದೇ ಸಮಯವೆಂದು ಜಯಸಿಂಹನು ದಂಡನ್ನು ತೆಗೆದುಕೊಂಡು ಮುಗರನ ಮೇಲೆರಗಿದನು. ಘೋರ ಯುದ್ಧವಾಯಿತು. ಹೋಮದಿಂದೆದ್ದ ದುರದುಂಬಿಗಳು ಕಿರಾತರನ್ನು ಕಚ್ಚಿ ಕಚ್ಚಿ ಕೆಡಹಿದುವು. ಜಯಸಿಂಹನ ಪಡೆಯು ಕಿರಾತ ಪಡೆಯನ್ನು ನಿರಾಯಾಸವಾಗಿ ಕೊಂದೊರಗಿಸಿತು. ಚಂದ್ರಾಯುಧಕ್ಕೆ ತುತ್ತಾದರು. ಸೀಮೆಯು ನಿಷ್ಕಂಟಕವಾಯಿತು.
(ನಾಳೆಗೆ ಮುಂದುವರಿಯುವುದು.)