ಕೋಲ್ಕತ್ತ: 'ರೀಮಲ್' ಚಂಡಮಾರುತ ತೀವ್ರ ಸ್ವರೂಪ ಪಡೆಯುತ್ತಿದ್ದು, ಇಂದು ಮಧ್ಯರಾತ್ರಿ ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದೇಶ ಕರಾವಳಿಗೆ ಅಪ್ಪಳಿಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳ ಕರಾವಳಿಯಲ್ಲಿ 1 ಲಕ್ಷ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ.
ಪಶ್ಚಿಮ ಬಂಗಾಳದ ಕರಾವಳಿಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಭಾರಿ ಬಿರುಗಾಳಿ ಬೀಸುವ ಸಾಧ್ಯತೆ ಇದೆ ಎಂದು ತಿಳಿಸಲಾಗಿದೆ. ಕೆಲವೆಡೆ ಈಗಾಗಲೇ ಮಳೆ ಆರಂಭವಾಗಿದೆ.
ಸಾಗರ ದ್ವೀಪದಿಂದ 160 ಕಿ.ಮೀ ದೂರದಲ್ಲಿ ರೀಮಲ್ ಚಂಡಮಾರುತ ಕೇಂದ್ರೀಕೃತವಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ(ಐಎಂಡಿ) ತಿಳಿಸಿದೆ.
100ರಿಂದ 110 ಕಿ.ಮೀ ವೇಗದಲ್ಲಿ ಚಂಡಮಾರುತ ಬೀಸುವ ಸಾಧ್ಯತೆ ಇದ್ದು, ಪಶ್ಚಿಮ ಬಂಗಾಳದ ಸಾಗರ ದ್ವೀಪ ಮತ್ತು ಬಾಂಗ್ಲಾದೇಶದ ಮೊಂಗ್ಲಾ ಬಂದರು ಸಮೀಪದ ಖೇಪುಪರ ನಡುವೆ ಇಂದು ಮಧ್ಯರಾತ್ರಿ ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಧ್ಯಾಹ್ನ 3 ಗಂಟೆ ಸುಮಾರಿಗೆ ಕರಾವಳಿ ಮತ್ತು ತಗ್ಗು ಪ್ರದೇಶಗಳ 1 ಲಕ್ಷ ಜನರನ್ನು ಪಶ್ಚಿಮ ಬಂಗಾಳ ಸರ್ಕಾರ ಸ್ಥಳಾಂತರಿಸಿದೆ.
ಸುಂದರಬನ ಹಾಗೂ ಸಾಗರ ದ್ವೀಪದಿಂದಲೂ ಜನರನ್ನು ಸ್ಥಳಾಂತರ ಮಾಡಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ರಕ್ಷಣೆ ಹಾಗೂ ಪರಿಹಾರ ಕಾರ್ಯಕ್ಕೆ ನೆರವಾಗಲು ರಾಜ್ಯದ ಪರಿಹಾರ ನಿರ್ವಹಣಾ ತಂಡ ಮತ್ತು ಎನ್‌ಡಿಆರ್‌ಎಫ್‌ನ ತಲಾ 16 ತುಕಡಿಗಳನ್ನು ನಿಯೋಜಿಸಲಾಗಿದೆ.
'ಜನರನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸುವ ಯತ್ನಗಳು ಕರಾವಳಿ ಪ್ರದೇಶದ ಮೇಲೆ ಗಮನ ಕೇಂದ್ರೀಕರಿಸಿವೆ' ಎಂದು ಅವರು ತಿಳಿಸಿದ್ದಾರೆ. ರಾಜ್ಯ ಸರ್ಕಾರವು ಅಂದಾಜು 5.4 ಲಕ್ಷ ಟಾರ್ಪಾಲಿನ್‌ಗಳನ್ನು ವಿತರಿಸಿದೆ. ಆಹಾರ ಧಾನ್ಯಗಳ ಪೊಟ್ಟಣ, ಹಾಲಿನ ಪುಡಿ, ಕುಡಿಯುವ ನೀರಿನ ಪೊಟ್ಟಣಗಳು ಈ ಪ್ರದೇಶದಲ್ಲಿ ಅಗತ್ಯ ಪ್ರಮಾಣದಲ್ಲಿ ಲಭ್ಯವಿರುವಂತೆ ಖಾತರಿಪಡಿಸಲಾಗಿದೆ.
ಪರಿಸ್ಥಿತಿಯನ್ನು ಅವಲೋಕಿಸಲು ರಾಜ್ಯದ ಸಚಿವಾಲಯದಲ್ಲಿ ಕೇಂದ್ರೀಕೃತ ನಿಯಂತ್ರಣ ಘಟಕವೊಂದನ್ನು ಆರಂಭಿಸಲಾಗಿದೆ.
ರೀಮಲ್ ಚಂಡಮಾರುತ ಅಪ್ಪಳಿಸುವ ಹಿನ್ನೆಲೆ ಕೈಗೊಂಡ ಕ್ರಮಗಳ ಕುರಿತು ಪರಿಶೀಲನೆ ನಡೆಸಲು ಪ್ರಧಾನಿ ಮೋದಿ ಪರಿಶೀಲನಾ ಸಭೆ ನಡೆಸಿದ್ದಾರೆ.
ಇತ್ತ, ನೆರೆಯ ಬಾಂಗ್ಲಾದೇಶವು ಸಹ ಕರಾವಳಿಯ ಸತ್ಕೀರ ಮತ್ತು ಕಾಕ್ಸ್ ಬಜಾರ್ ಜಿಲ್ಲೆಗಳಿಂದ 8 ಲಕ್ಷ ಜನರನ್ನು ಸ್ಥಳಾಂತರಿಸಿದೆ.
ಬಾಂಗ್ಲಾದೇಶ ಹವಾಮಾನ ಇಲಾಖೆ ಅತ್ಯಂತ ಅಪಾಯದ ಮುನ್ಸೂಚನೆ ನೀಡಿದೆ.
ಚಂಡಮಾರುತದ ಹಾನಿ ನಿರ್ವಹಣೆಗೆ ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗಿದ್ದು, 8 ಲಕ್ಷ ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಬಾಂಗ್ಲಾದ ವಿಪತ್ತು ನಿರ್ವಹಣಾ ಮತ್ತು ಪರಿಹಾರ ಸಚಿವ ಮೊಹಮ್ಮದ್ ಮೊಹಿಬುರ್ ರೆಹಮಾನ್ ಹೇಳಿದ್ದಾರೆ.