ಜೆರುಸಲೇಂ: 'ಆಹಾರ, ಇಂಧನ ಪೂರೈಕೆಯಲ್ಲಿ ಭಾರಿ ವ್ಯತ್ಯಯವಾಗಿರುವ 1,10,000ಕ್ಕೂ ಹೆಚ್ಚು ಮಂದಿ ಗಾಜಾದ ದಕ್ಷಿಣ ಭಾಗದಲ್ಲಿರುವ ರಫಾ ನಗರ ತೊರೆದಿದ್ದಾರೆ' ಎಂದು ವಿಶ್ವಸಂಸ್ಥೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಮೆರಿಕದ ಎಚ್ಚರಿಕೆಯ ನಡುವೆಯೂ ರಫಾ ನಗರ ಗುರಿಯಾಗಿಸಿ ಇಸ್ರೇಲ್ ದಾಳಿ ಮುಂದುವರಿಸಿರುವುದು ಇದಕ್ಕೆ ಕಾರಣ.
ಇಂಧನದ ಕೊರತೆಯು ಗಾಜಾದಾದ್ಯಂತ ವೈದ್ಯಕೀಯ ವ್ಯವಸ್ಥೆ, ನೀರಿನ ಪೂರೈಕೆ ವ್ಯವಸ್ಥೆಯ ಮೇಲೂ ಪರಿಣಾಮ ಬೀರಿದೆ. ದಾಳಿಯಿಂದಾಗಿ ಗಾಜಾದಲ್ಲಿ 34,500ಕ್ಕೂ ಹೆಚ್ಚು ಮಂದಿ ಸತ್ತಿದ್ದಾರೆ. ವಸತಿ ಸಮುಚ್ಚಯಗಳು, ಆಸ್ಪತ್ರೆ, ಮಸೀದಿ, ಶಾಲೆ ಕಟ್ಟಡಗಳು ನೆಲಸಮವಾಗಿವೆ ಎಂದು ಹೇಳಿದೆ.
ಏಕಾಂಗಿ ಹೋರಾಟಕ್ಕೂ ಸಿದ್ಧ: 'ಹಮಾಸ್ ಬಂಡುಕೋರರ ವಿರುದ್ಧದ ಹೋರಾಟಕ್ಕೆ ಅಮೆರಿಕ ನೆರವು ನೀಡದಿದ್ದರೂ ಇಸ್ರೇಲ್ ಏಕಾಂಗಿಯಾಗಿ ಹೋರಾಡಲಿದೆ' ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ತಿಳಿಸಿದ್ದಾರೆ.
ಅಮೆರಿಕ ಮತ್ತು ಇಸ್ರೇಲ್ ನಡುವಿನ ಇನ್ನಷ್ಟು ಗಂಭೀರವಗುತ್ತಿರುವ ಬೆನ್ನಲ್ಲೇ ಈ ಹೇಳಿಕೆ ಹೊರಬಿದ್ದಿದೆ.
ವಿಶ್ವಸಂಸ್ಥೆ ವರದಿ: ಪ್ಯಾಲೆಸ್ಟೀನ್‌ಗೆ ಹಕ್ಕುಗಳು ಮತ್ತು ಸವಲತ್ತು ಕಲ್ಪಿಸುವ ಹಾಗೂ ವಿಶ್ವಸಂಸ್ಥೆಯ 194ನೇ ಸದಸ್ಯ ರಾಷ್ಟ್ರವಾಗುವ ಕುರಿತ ನಿರ್ಣಯವನ್ನು ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಶುಕ್ರವಾರ ಮತಕ್ಕೆ ಹಾಕುವ ಸಾಧ್ಯತೆ ಇದೆ.
ಇಸ್ರೇಲ್ ತೊರೆದ ಅಲ್‌ಜಿಝಿರಾ ಸಿಬ್ಬಂದಿ
ಜೆರುಸಲೇಂ ವರದಿ (ಎ.ಪಿ): ದೇಶದಲ್ಲಿರುವ ಕಚೇರಿ ಮುಚ್ಚಬೇಕು, ವರದಿ ಮಾಡಬಾರದು ಎಂದು ಇಸ್ರೇಲ್ ಸರ್ಕಾರದ ಆದೇಶದಿಂದಾಗಿ 'ನಮ್ಮ ಎಲ್ಲ ಸಿಬ್ಬಂದಿ ಇಸ್ರೇಲ್ ತೊರೆದಿದ್ದಾರೆ' ಎಂದು 'ಅಲ್‌ಜಝೀರಾ' ಸುದ್ದಿ ವಾಹಿನಿಯು ತಿಳಿಸಿದೆ.