ಕಾಸರಗೋಡು: ವಿವಿಧ ಬೇಡಿಕೆಗಳನ್ನು ಮುಂದಿರಿಸಿ ಎಂಡೋಸಲ್ಪಾನ್ ಸಂತ್ರಸ್ತರು ಕಾಂಞಂಗಾಡ್ ಮಿನಿ ಸಿವಿಲ್ ಸ್ಟೇಶನ್ ಮುಂಭಾಗ ನಡೆಸುತ್ತಿರುವ ಚಳವಳಿ ಬುಧವಾರ 100 ನೇ ದಿನವನ್ನು ಪೂರ್ತಿಗೊಳಿಸಿದೆ. ಇದರಂಗವಾಗಿ ಕಾಂಞಂಗಾಡ್ ಆರ್‍ಡಿಒ ಕಚೇರಿಯ ಮುಂಭಾಗದಲ್ಲಿ ಧರಣಿ ನಡೆಯಿತು.
ಆರ್ಥಿಕ ಸಂದಿಗ್ಧತೆ ಹೆಸರಿನಲ್ಲಿ ಎಂಡೋ ಸಂತ್ರಸ್ತರಿಗೆ ಚಿಕಿತ್ಸೆ, ಔಷಧ ವಿತರಣೆ ಮೊದಲಾದ ಸೌಲಭ್ಯಗಳು ಮೊಟಕುಗೊಳಿಸಿದ ಸರ್ಕಾರ ಸುಪ್ರೀಂಕೋರ್ಟ್‍ನ ತೀರ್ಪನ್ನು ಉಲ್ಲಂಘಿಸಿದೆ ಎಂದು ಮುಷ್ಕರ ಸಮಿತಿ ನೇತಾರರು ಆರೋಪಿಸಿದ್ದಾರೆ. ಎಂಡೋಸಲ್ಪಾನ್ ಸಂತ್ರಸ್ತರಿಗಾಗಿ ವೆಚ್ಚವಾಗುವ ಮೊತ್ತವನ್ನು ಕಂಪೆನಿಯಿಂದ ಅಥವಾ ಕೇಂದ್ರ ಸರ್ಕಾರದಿಂದ ಪಡೆಯಬೇಕೆಂದು ನ್ಯಾಯಾಲಯ ಆದೇಶಿಸಿದ್ದರೂ ಕೇರಳ ಸರ್ಕಾರ ಅದಕ್ಕೆ ಮುಂದಾಗಿಲ್ಲವೆಂದೂ ನೇತಾರರು ತಿಳಿಸಿದ್ದಾರೆ. ಸಂಸದ, ಶಾಸಕರ ಸಹಿತ ಜನಪ್ರತಿನಿಧಿಗಳು ಎಂಡೋಸಲ್ಪಾನ್ ಸಂತ್ರಸ್ತರನ್ನು ನಿರ್ಲಕ್ಷ್ಯದಿಂದ ಕಾಣುತ್ತಿದ್ದಾರೆಂದೂ ಆರೋಪಿಸಿದ್ದಾರೆ.
ಈ ಬಗ್ಗೆ ನಡೆದ ಸಭೆಯಲ್ಲಿ ಎಂ.ಕೆ.ಅಜಿತ್ ಅಧ್ಯಕ್ಷತೆ ವಹಿಸಿದ್ದರು. ಅಂಬಲತ್ತರ ಕುಂಞÂಕೃಷ್ಣನ್, ಕನಕರಾಜ್ ಎಳೇರಿ, ಇ.ತಂಬಾನ್, ಹಕೀಂ ಚೆಡೇಕಲ್, ಕುಮಾರನ್ ಕಾಡಂಕೋಡ್, ಪ್ರಮೀಳ ಚಂದ್ರನ್, ಬೇಬಿ ಅಂಬಿಳಿ, ಬಿಂದು ಅಲಾಯಿ, ಭವಾನಿ ಬೇಳೂರು, ಶಾರದಾ ಮಧೂರು, ಅವ್ವಮ್ಮ ಮಂಜೇಶ್ವರ, ಪುಷ್ಪಾ ಪುಲ್ಲೂರು, ಪಿ.ಶೈನಿ, ತಸ್ರಿಯಾ ಚೆಂಗಳ ಮೊದಲಾದವರು ಮಾತನಾಡಿದರು.