ಶಿಮ್ಲಾ: ದೇಶವನ್ನು ಒಡೆದು ಆಳುವ ಸಂಸ್ಕೃತಿಯ ಬದಲು ಪ್ರಧಾನಿ ನರೇಂದ್ರ ಮೋದಿ ಅವರು 'ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್' ಮಂತ್ರದೊಂದಿಗೆ ಅಭಿವೃದ್ಧಿಯತ್ತ ಸಾಗುವ ಮೂಲಕ ರಾಜಕೀಯ ಸಂಸ್ಕೃತಿಯನ್ನೇ ಬದಲಾಯಿಸಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಶನಿವಾರ ಹೇಳಿದ್ದಾರೆ.
ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿದ ಅವರು '70 ವರ್ಷಗಳ ಕಾಲ ದೇಶದಲ್ಲಿ ಒಡೆದು ಆಳುವ ನೀತಿ ಇತ್ತು. ಆದರೆ ಕಳೆದ 10 ವರ್ಷಗಳಲ್ಲಿ ಚುನಾಯಿತ ಪ್ರತಿನಿಧಿಗಳು ತಮ್ಮ ಕ್ಷೇತ್ರದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳ 'ರಿಪೋರ್ಟ್ ಕಾರ್ಡ್' ಅನ್ನು ತೋರಿಸಬೇಕಾಗಿದೆ ಎಂದು ಹೇಳಿದ್ದಾರೆ.
'ಇಂಡಿಯಾ' ಮೈತ್ರಿಕೂಟವನ್ನು ಸನಾತನ ವಿರೋಧಿ, ರಾಷ್ಟ್ರೀಯ ವಿರೋಧಿ ಎಂದು ವಾಗ್ದಾಳಿ ನಡೆಸಿದ ನಡ್ಡಾ, ಸೋನಿಯಾ ನೇತೃತ್ವದ ಯುಪಿಎ ಸರ್ಕಾರವು ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅಫಿಡವಿಟ್‌ನಲ್ಲಿ ರಾಮ ಕಾಲ್ಪನಿಕ ಎಂದು ಹೇಳಿತ್ತು. ಆದರೆ ಅಯೋಧ್ಯೆಯಲ್ಲಿ ರಾಮಮಂದಿರವನ್ನು ಮೋದಿ ಸರ್ಕಾರ ನಿರ್ಮಿಸಿದೆ ಎಂದು ತಿಳಿಸಿದ್ದಾರೆ.
'ಇಂಡಿಯಾ ಮೈತ್ರಿಕೂಟ'ವೆಂದರೆ ಕುಟುಂಬ ರಾಜಕಾರಣ ಹಾಗೂ ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವರನ್ನು ರಕ್ಷಿಸುವ ಮೈತ್ರಿಯಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಯುರೋಪ್ ರಾಷ್ಟ್ರಗಳ ಆರ್ಥಿಕತೆ ಕುಸಿಯುತ್ತಿರುವಾಗ, ಚೀನಾ ಆರ್ಥಿಕವಾಗಿ ಹಿಂದುಳಿಯುತ್ತಿರುವಾಗ ವಿಶ್ವದ 11ನೇ ಸ್ಥಾನದಲ್ಲಿದ್ದ ಭಾರತದ ಆರ್ಥಿಕತೆಯು 5ನೇ ಸ್ಥಾನಕ್ಕೆ ಜಿಗಿದಿದೆ. ಭಾರತವನ್ನು 'ಹೊಳೆಯುತ್ತಿರುವ ನಕ್ಷತ್ರದಂತೆ' ಎಂದು ಬಣ್ಣಿಸಿರುವ ನಡ್ಡಾ, ಮೋದಿ ಮೂರನೇ ಬಾರಿಗೆ ಪ್ರಧಾನಿಯಾದರೆ ಭಾರತ ವಿಶ್ವದ ಮೂರನೇ ಆರ್ಥಿಕ ರಾಷ್ಟ್ರವಾಗಲಿದೆ ಎಂದು ಹೇಳಿದ್ದಾರೆ.