ಕಾಸರಗೋಡು: ಕಾಞಂಗಾಡ್ ಮಿನಿ ಸಿವಿಲ್ ಸ್ಟೇಷನ್ ಎದುರು ಕಳೆದ ಕೆಲವು ತಿಂಗಳಿಂದ ಪ್ರತಿಭಟನೆ ನಡೆಸುತ್ತಿರುವ ಎಂಡೋಸಲ್ಫಾನ್ ಸಂತ್ರಸ್ತರ ಬೇಡಿಕೆ ಈಡೇರಿಸದ ಸರ್ಕಾರದ ಕ್ರಮ ಖಂಡಿಸಿ ಜೂನ್ 10ರಿಂದ ಅನಿರ್ದಿಷ್ಟಾವಧಿ ಅಹೋರಾತ್ರಿ ಉಪವಾಸ ಸತ್ಯಾಗ್ರಹ ನಡೆಸಲು ಹೋರಾಟ ಸಮಿತಿ ತೀರ್ಮಾನಿಸಿದೆ. ಪ್ರಾಣ ತೆರುವ ಸನ್ನಿವೇಶ ಎದುರಾದರೂ, ಹೋರಾಟದಿಂದ ಹಿಂದೆ ಸರಿಯದಿರಲು ಸಮಿತಿ ನಿರ್ಧರಿಸಿದೆ.
1031 ಮಂದಿ ಸಂತ್ರಸ್ತರನ್ನು ಎಂಡೋಸಲ್ಫಾನ್ ಪಟ್ಟಿಗೆ ಮರು ಸೇರ್ಪಡೆಗೊಳಿಸಬೇಕು, ಸಂತ್ರಸ್ತರಿಗೆ ಸೂಕ್ತ ಚಿಕಿತ್ಸೆ ಹಾಗೂ ಔಷಧ ಒದಗಿಸಬೇಕು, ಎಂಡೋಸೆಲ್ ಸಭೆ ನಡೆಸಬೇಕು, ವಿವಾದಿತ ಆದೇಶ ಹಿಂಪಡೆಯಬೇಕು ಮುಂತಾದ ಬೇಡಿಕೆ ಮುಂದಿರಿಸಿ 2024 ಜನವರಿ 30ರಿಂದ ಸಂತ್ರಸ್ತ ಕುಟುಂಬಗಳ ತಾಯಂದಿರ ನೇತೃತ್ವದಲ್ಲಿ ಸತ್ಯಾಗ್ರಹ ಆರಂಭಿಸಿದ್ದರು.
ಸಂತ್ರಸ್ತರಿಗೆ ಅಗತ್ಯವಿರುವ ಪರಿಹಾರ ಮೊತ್ತ ಎಂಡೋಸಲ್ಫಾನ್ ಕಂಪನಿಯಿಂದ ಅಥವಾ ಕೇಂದ್ರ ಸರ್ಕಾರದಿಂದ ಸುಪ್ರೀಂ ಕೋರ್ಟ್ ತೀರ್ಪು ನೀಡಿದರನೀ ಬಗ್ಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಬದಲು ಸಂತ್ರಸ್ತರ ಸಂಖ್ಯೆ ಕಡಿಮೆ ಮಾಡಿ ಚಿಕಿತ್ಸೆ ನಿಲ್ಲಿಸುವ ಮೂಲಕ ಸಂತ್ರಸ್ತರಿಗೆ ಹಾನಿ ಮಾಡುವ ಧೋರಣೆಯನ್ನು ಕೇರಳ ಸರ್ಕಾರ ನಿಲ್ಲಿಸಬೇಕು ಎಂದು ಹೋರಾಟ ಸಮಿತಿ ಆಗ್ರಹಿಸಿದೆ.
ಯಾವುದೇ ಬೆಲೆ ತೆತ್ತಾದರೂ ವಿಷಮಳೆ ಸುರಿಸಿರುವ ಕಂಪನಿಗಳನ್ನು ಉಳಿಸುವ ಸರ್ಕಾರದ ಕ್ರಮದ ವಿರುದ್ಧ ಹೋರಾಟ ನಡೆಸಲು ಮುಷ್ಕರ ಸಮಿತಿ ಸಭೆಯಲ್ಲಿ ತೀರ್ಮಾನಿಸಿತು.
ಕಾಸರಗೋಡಿನ ವಿವಿಧ ಪಂಚಾಯಿತಿಗಳ ಜನತೆಯ ಅನಾರೋಗ್ಯಕ್ಕೆ ಕಾರಣವಾಗಿರುವ ಕೀಟನಾಶಕ ಎಂದು ಸಾಬೀತಾದರೂ ಎಂಡೋಸಲ್ಫಾನ್ ಕಂಪನಿಗೆ ಬೆಂಬಲವಾಗಿ ನಿಲ್ಲುವ ಕ್ರಮ ಖಂಡನೀಯ ಎಂದು ಸಭೆ ತಿಳಿಸಿತು. ಸಭೆಯಲ್ಲಿ ಎಂ.ಕೆ. ಅಜಿತಾ ಅಧ್ಯಕ್ಷತೆ ವಹಿಸಿದ್ದರು. ಇ. ತಂಬಾನ್, ಶ್ರೀಧರನ್ ಮಡಿಕೈ, ನಂದಕುಮಾರ್, ಹಮೀದ್ ಚೇರಂಗೈ, ಅಂಬಾಪ್ರಸಾದ್, ಕುಮಾರನ್ ಕಡಂಗೋಟ್, ಭವಾನಿ ಬೇಲೂರು, ಮಿಸಿರಿಯಾ ಚೆಂಗಳ, ಬೇಬಿ ಅಂಬಿಲಿ, ಬಿಂದು ಅಲೈ, ತಸಿರಿಯಾ ಚೆಂಗಳ, ಅಂಬಲತ್ತರ ಕುಞಕೃಷ್ಣನ್, ಕೃಷ್ಣನ್ ಮಡಿಕೈ, ಪುಷ್ಪಾ ಪುಲ್ಲೂರು, ಕೃಷ್ಣನ್ ಕಟಕಂ, ರಾಬಿಯಾ ಮತ್ತು ಶೋಭಾ ಚೆಮ್ನಾಡ್ ಉಪಸ್ಥಿತರಿದ್ದರು. ಪಿ.ಶೈನಿ ಸ್ವಾಗತಿಸಿದರು. ಸರಸ್ವತಿ ಅಜನೂರು ವಂದಿಸಿದರು.