ಅಹಮದಾಬಾದ್: ಗುಜರಾತಿನ ದಾಹೋದ್ ಲೋಕಸಭಾ ಕ್ಷೇತ್ರದ ಮತಗಟ್ಟೆಯೊಂದರಲ್ಲಿ ಮೇ 7ರಂದು ನಡೆದ ಮತದಾನ ಪ್ರಕ್ರಿಯೆಯನ್ನು ವ್ಯಕ್ತಿಯೊಬ್ಬ ಇನ್‌ಸ್ಟಾಗ್ರಾಮ್‌ನಲ್ಲಿ ನೇರ ಪ್ರಸಾರ ಮಾಡಿದ್ದ ವಿಡಿಯೊ ವ್ಯಾಪಕವಾಗಿ ಹರಿದಾಡಿದ ಬೆನ್ನಲ್ಲೇ, ಚುನಾವಣಾ ಆಯೋಗವು ಆ ಮತಗಟ್ಟೆಗೆ ಇದೇ 11ರಂದು ಮರು ಮತದಾನ ಮಾಡಲು ಆದೇಶ ಹೊರಡಿಸಿದೆ.
ಅಲ್ಲದೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಿಸೈಡಿಂಗ್ ಅಧಿಕಾರಿ, ಸಹಾಯಕ ಪ್ರಿಸೈಡಿಂಗ್ ಅಧಿಕಾರಿ, ಇಬ್ಬರು ಮತಗಟ್ಟೆ ಅಧಿಕಾರಿಗಳು ಹಾಗೂ ಒಬ್ಬ ಪೊಲೀಸ್ ಪೇದೆಯನ್ನು ಅಮಾನತುಗೊಳಿಸಲಾಗಿದೆ ಎಂದು ಗುಜರಾತಿನ ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.
ಮಹಿಸಾಗರ ಜಿಲ್ಲೆಯ ಸಂತ್ರಾಂಪುರ ತಾಲ್ಲೂಕಿನ ಪಾರ್ಥಂಪುರ ಮತಗಟ್ಟೆಯಲ್ಲಿ ಈ ಪ್ರಕರಣ ನಡೆದಿತ್ತು. ಈ ಕುರಿತು ಚುನಾವಣಾಧಿಕಾರಿ ಮತ್ತು ವೀಕ್ಷಕರು ಸಲ್ಲಿಸಿದ ವರದಿಯನ್ನು ಗಣನೆಗೆ ತೆಗೆದುಕೊಂಡ ಆಯೋಗವು, ಆ ಮತಗಟ್ಟೆಯಲ್ಲಿ ನಡೆದಿದ್ದ ಮತದಾನವನ್ನು ಅಸಿಂಧು ಎಂದು ಘೋಷಿಸಿತು ಎಂದು ಸಿಇಒ ಹೇಳಿದ್ದಾರೆ.
ಮೇ 11ರಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಈ ಮತಗಟ್ಟೆಯಲ್ಲಿ ಇಲ್ಲಿ ಹೊಸದಾಗಿ ಮತದಾನ ನಡೆಯಲಿದೆ.
ಆರೋಪಿ ವಿಜಯ್ ಭಾಭೋರ್ ಎಂಬಾತನು ಐದು ನಿಮಿಷಗಳ ಕಾಲ ಮತಗಟ್ಟೆಯಲ್ಲಿ ಉಳಿದುಕೊಂಡು ಮತದಾನವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ನೇರ ಪ್ರಸಾರ ಮಾಡಿದ್ದಾನೆ. ಅಲ್ಲದೆ ಇಬ್ಬರು ಮತದಾರರ ಪರವಾಗಿ ಮತ ಚಲಾಯಿಸಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಕುರಿತ ವಿಡಿಯೊದೊಂದಿಗೆ ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ದೂರು ನೀಡಿ, ಮರು ಮತದಾನಕ್ಕೆ ಆಗ್ರಹಿಸಿತ್ತು.