ವಿಶ್ವಸಂಸ್ಥೆ : 1995ರ ಸ್ರೆಬೆನಿಕಾ ಹತ್ಯಾಕಾಂಡದಲ್ಲಿ ಹತರಾದವರ ಸ್ಮರಣಾರ್ಥ ಜುಲೈ 11ನ್ನು ಸ್ರೆಬೆನಿಕಾ ನರಮೇಧದ ಸ್ಮರಣೆಯ ದಿನವೆಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಗುರುವಾರ ಘೋಷಿಸಿದೆ.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಜರ್ಮನಿ ಮತ್ತು ರವಾಂಡಾ ಮಂಡಿಸಿದ ಪ್ರಸ್ತಾವನೆಯನ್ನು ಸರ್ಬಿಯಾ ಉಗ್ರವಾಗಿ ವಿರೋಧಿಸಿ ಪ್ರಸ್ತಾವನೆಯ ಪರ ಮತ ಹಾಕುವಂತೆ `ಲಾಬಿ' ನಡೆಸಿತ್ತು.
ಇದು ರಾಜಕೀಯ ನಿರ್ಣಯವಾಗಿದ್ದು ಸರ್ಬಿಯಾ ಮತ್ತು ಸರ್ಬಿಯಾ ಜನರನ್ನು ನರಮೇಧಕ್ಕೆ ಸಾಮೂಹಿಕ ಹೊಣೆಗಾರರನ್ನಾಗಿ ಬ್ರಾಂಡ್ ಮಾಡುವ ಅಪಾಯವಿದೆ ಎಂದು ಸೆರ್ಬಿಯಾ ಅಧ್ಯಕ್ಷ ಅಲೆಕ್ಸಾಂಡರ್ ವುಕಿಕ್ ಪ್ರತಿಪಾದಿಸಿದ್ದರು. ಅಂತಿಮವಾಗಿ ಪ್ರಸ್ತಾವನೆಯ ಪರ 84 ದೇಶಗಳು, ವಿರುದ್ಧ 19 ದೇಶಗಳು ಮತ ಚಲಾಯಿಸಿದರೆ 68 ದೇಶಗಳ ಪ್ರತಿನಿಧಿಗಳು ಮತದಾನದಿಂದ ದೂರ ಉಳಿದರು.
ಪೂರ್ವ ಬೋಸ್ನಿಯಾದ ಸ್ರೆಬ್ರೆನಿಕಾ ಪ್ರದೇಶವನ್ನು `ಸುರಕ್ಷಿತ ಪ್ರದೇಶ'ವೆಂದು ಘೋಷಿಸಿದ್ದ ವಿಶ್ವಸಂಸ್ಥೆ, ಅಲ್ಲಿ ಶಾಂತಿಪಾಲನಾ ಪಡೆಯನ್ನು ನಿಯೋಜಿಸಿತ್ತು. 1995ರಲ್ಲಿ ಈ ಪ್ರದೇಶಕ್ಕೆ ನುಗ್ಗಿದ್ದ ಬೋಸ್ನಿಯನ್ ಸರ್ಬ್ ಪಡೆ (ಬೋಸ್ನಿಯಾ ಹರ್ಜೆಗೋವಿನಾ ದೇಶದೊಳಗೆ ಸ್ವಘೋಷಿತ ಗಣರಾಜ್ಯದ ಪಡೆ) ಮುಸ್ಲಿಮ್ ಪುರುಷರು ಮತ್ತು ಬಾಲಕರನ್ನು ಕುಟುಂಬದವರಿಂದ ಪ್ರತ್ಯೇಕಿಸಿತ್ತು. ಮರುದಿನ ಪೂರ್ವ ಬೋಸ್ನಿಯಾದಲ್ಲಿ ಸಾಮೂಹಿಕ ಸಮಾಧಿಯಲ್ಲಿ ಸುಮಾರು 8 ಸಾವಿರ ಪುರುಷರು ಮತ್ತು ಬಾಲಕರ ಮೃತದೇಹ ಪತ್ತೆಯಾಗಿತ್ತು.