ಉಪ್ಪಳ: ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಉಪ್ಪಳದಲ್ಲಿ ನಡೆದ ಯುವಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು 11ವರ್ಷಗಳ ನಂತರ ಬಂಧಿಸಲಾಗಿದೆ. ಭದ್ರಾವತಿ ದೇವನಹಳ್ಳಿ ನಿವಾಸಿ ಸಯ್ಯದ್ ಆಸಿಫ್(34)ಬಂಧಿತ.
ಉಪ್ಪಳ ಮಣ್ಣಂಗುಳಿ ಮೈದಾನ ಸನಿಹದ ನಿವಾಸಿ ಮುತ್ತಲೀಬ್(38)ಎಂಬವರನ್ನು 2013ರಲ್ಲಿ ಕೊಲೆಗೈದ ಪ್ರಕರಣದಲ್ಲಿ ಸಯ್ಯದ್ ಆಸಿಫ್ ಆರೋಪಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಉಪ್ಪಳದಲ್ಲಿ ಬಾಡಿಗೆ ಕೊಠಡಿಯಲ್ಲಿ ವಾಸಿಸುತ್ತಿದ್ದ ಸಯ್ಯದ್ ಆಸಿಫ್ ಆಟೋರಿಕ್ಷಾ ಚಾಲಕನಾಗಿ ಕೆಲಸ ನಡೆಸುತ್ತಿದ್ದನು.ಮುತ್ತಲೀಬ್ ಕೊಲೆ ನಂತರ ಆಸಿಫ್ ತಲೆಮರೆಸಿಕೊಂಡಿದ್ದನು. ಆರೋಪಿ ಭದ್ರಾವತಿಯ ದೇವನಹಳ್ಳಿಯಲ್ಲಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ಅಲ್ಲಿಗೆ ತೆರಳಿ ಆರೋಪಿಯನ್ನು ಬಂಧಿಸಿ ಕರೆತಂದಿದ್ದಾರೆ. 2013 ಅಕ್ಟೋಬರ್ 24ರಂದು ಉಪ್ಪಳ ಮಣ್ಣಂಗುಳಿ ಮೈದಾನದ ಬಳಿ ಕಾರಿನಲ್ಲಿ ಸಂಚರಿಸುತ್ತಿದ್ದ ಮುತ್ತಲೀಬ್ ಅವರನ್ನು ತಂಡ ಇರಿದು ಕೊಲೆಗೈದಿತ್ತು.