ತಿರುವನಂತಪುರ: ಕೇರಳದ 14 ಜಿಲ್ಲೆಗಳ ಪೈಕಿ 12 ಜಿಲ್ಲೆಗಳಲ್ಲಿ ಮೇ 6ರವರೆಗೆ ಬಿಸಿ ಗಾಳಿ ವಾತಾವರಣ ಮುಂದುವರಿಯಲಿದ್ದು, ಭಾರತೀಯ ಹವಾಮಾನ ಇಲಾಖೆಯು (ಐಎಂಡಿ) ಯೆಲ್ಲೋ ಅಲರ್ಟ್ ಘೋಷಿಸಿದೆ.
ಪಾಲಕ್ಕಾಡ್‌ನಲ್ಲಿ ಗರಿಷ್ಠ ತಾಪಮಾನ 39 ಡಿಗ್ರಿ ಸೆಲ್ಸಿಯಸ್, ಕೊಲ್ಲಂ, ತ್ರಿಶ್ಶೂರ್, ಕೋಯಿಕ್ಕೋಡ್‌ನಲ್ಲಿ 38 ಡಿಗ್ರಿ ಸೆಲ್ಸಿಯಸ್, ಅಲಪ್ಪುಳ, ಕೊಟ್ಟಾಯಂ, ಪತ್ತನಂತಿಟ್ಟ, ಕಣ್ಣೂರು ಜಿಲ್ಲೆಗಳಲ್ಲಿ 37 ಡಿಗ್ರಿ ಸೆಲ್ಸಿಯಸ್, ತಿರುವನಂತಪುರ, ಎರ್ನಾಕುಲಂ, ಮಲಪ್ಪುರಂ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ 36 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗುವ ಸಾಧ್ಯತೆ ಇದೆ ಎಂದು ಐಎಂಡಿ ಹೇಳಿದೆ.
ರಾತ್ರಿ ವೇಳೆಯು ಸಹ ಬಿಸಿಯ ವಾತಾವರಣದ ಸಾಧ್ಯತೆ ಇರುವುದರಿಂದ ಅಲಪ್ಪುಳ, ಕೋಯಿಕ್ಕೋಡ್ ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್ ನೀಡಲಾಗಿದೆ.
ಜೈಪುರ ವರದಿ: ರಾಜಸ್ಥಾನದ ಕೆಲವು ಭಾಗದಲ್ಲಿ ಮುಂದಿನ ಕೆಲವು ದಿನ ಗರಿಷ್ಠ ತಾಪಮಾನದಲ್ಲಿ 2ರಿಂದ 3 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಹೆಚ್ಚಳವಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪಶ್ಚಿಮ ರಾಜಸ್ಥಾನದ ಕೆಲವು ಸ್ಥಳಗಳಲ್ಲಿ ಮೇ 7ರಂದು ಗರಿಷ್ಠ ತಾಪಮಾನ 44ರಿಂದ 45 ಡಿಗ್ರಿ ಸೆಲ್ಸಿಯಸ್ ಆಗುವ ಸಾಧ್ಯತೆಯಿದೆ. ಜೋಧಪುರ ಮತ್ತು ಬೀಕಾನೆರ್ ವಿಭಾಗದಲ್ಲಿ ಶಾಖಾಘಾತದ ಬಿಸಿ ಗಾಳಿಯ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.
ಜೈಸಲ್ಮೇರ್, ಜೋಧಪುರ, ಬಾರ್ಮರ್, ನಾಗೌರ್, ಬೀಕಾನೆರ್, ಚುರು, ಜುಂಜುನು, ಕೋಟಾ, ಬರಾನ್ ಜಿಲ್ಲೆಗಳ ವಿವಿಧ ಸ್ಥಳಗಳಲ್ಲಿ ಮೇ 8ರಂದು ಶಾಖಾಘಾತದ ಬಿಸಿ ಗಾಳಿಯ ಸಾಧ್ಯತೆಯಿದೆ ಎಂದಿದ್ದಾರೆ.