ಕೊಚ್ಚಿ: ನವಜಾತ ಶಿಶುವನ್ನು ಕೊಂದು ರಸ್ತೆಗೆ ಎಸೆದ ಆರೋಪದ ಮೇಲೆ 23 ವರ್ಷದ ತಾಯಿಯನ್ನು ಇಲ್ಲಿನ ಸ್ಥಳೀಯ ನ್ಯಾಯಾಲಯ ಶನಿವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಯುವತಿ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಗೆ ತೆರಳಿದ ಎರ್ನಾಕುಲಂನ ಹೆಚ್ಚುವರಿ ಮುಖ್ಯ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್, ಅವರನ್ನು ಇದೇ 18ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮರಣೋತ್ತರ ಪರೀಕ್ಷಾ ವರದಿಯ ಪ್ರಕಾರ, ಹೆರಿಗೆ ಬಳಿಕ ಮಗುವಿನ ಕತ್ತು ಹಿಸುಕಿ ಕೊಂದು ಕೊಚ್ಚಿಯ ರಸ್ತೆಯೊಂದರಲ್ಲಿ ಎಸೆಯಲಾಗಿದೆ. ಮಗುವಿನ ತಲೆಬುರುಡೆಗೂ ಹಾನಿಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಯನ್ನು ಶುಕ್ರವಾರ ಬಂಧಿಸಲಾಯಿತು ಎಂದು ಅವರು ತಿಳಿಸಿದ್ದಾರೆ.
ಪ್ರಕರಣದ ವಿವರ: ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾರೆ ಎಂದು ಶಂಕಿಸಲಾಗಿರುವ ಯುವತಿಯು ಶುಕ್ರವಾರ ಮುಂಜಾನೆ ತನ್ನ ಅಪಾರ್ಟ್‌ಮೆಂಟ್ ಸ್ನಾನದ ಕೋಣೆಯಲ್ಲಿ ಮಗುವಿನ ಜನ್ಮ ನೀಡಿದ್ದಾರೆ. ನಂತರ ಫ್ಲಾಟ್ ಎದುರಿನ ರಸ್ತೆಯಲ್ಲಿ ನವಜಾತ ಶಿಶುವನ್ನು ಎಸೆದಿದ್ದಾರೆ ಎಂದು ಪೊಲೀಸರು ವಿವರಿಸಿದ್ದಾರೆ. ಯುವತಿಯು ತ್ರಿಶೂರ್‌ನ ತನ್ನ ಸ್ನೇಹಿತನಿಗೆ ಸಂಬಂಧಿಸಿದಂತೆ ಕೆಲ ಮಾಹಿತಿ ನೀಡಿದ್ದು, ಈ ಕುರಿತು ಪರಿಶೀಲಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ತನ್ನ ಮನೆಯ ಸ್ನಾನದ ಕೋಣೆಯಲ್ಲಿ ಶುಕ್ರವಾರ ಬೆಳಿಗ್ಗೆ 5ರಿಂದ 5.30ರ ಸುಮಾರಿಗೆ ಮಗುವಿಗೆ ಜನ್ಮ ನೀಡಿರುವುದಾಗಿ ಯುವತಿ ತಿಳಿಸಿದ್ದಾರೆ. ತನ್ನ ತಾಯಿಯು ಕೋಣೆಯ ಬಾಗಿಲು ತಟ್ಟಿದಾಗ ಗಾಬರಿಗೊಂಡು ಮಗುವನ್ನು ಎಸೆದಿದ್ದಾಗಿ ಅವರು ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಯುವತಿ ಗರ್ಭಿಣಿಯಾಗಿರುವ ಕುರಿತಾಗಲಿ, ಅವರಿಗೆ ಸ್ನಾನದ ಕೋಣೆಯಲ್ಲಿ ಹೆರಿಗೆಯಾದ ಬಗ್ಗೆಯಾಗಲಿ ಅವರ ಪೋಷಕರಿಗೆ ತಿಳಿದಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.