ನವದೆಹಲಿ: ಜಾಗತಿಕವಾಗಿ ಪ್ರತಿವರ್ಷ 1.53 ಲಕ್ಷ ಜನರು ಬಿಸಿಗಾಳಿಯಿಂದಾಗಿ ಮೃತಪಟ್ಟಿದ್ದಾರೆ. ಈ ರೀತಿ ಮೃತಪಡುವವರಲ್ಲಿ ಭಾರತೀಯರದ್ದೇ ಸಿಂಹಪಾಲು. ಒಟ್ಟು ಸಾವಿನ ಸಂಖ್ಯೆಯಲ್ಲಿ ಐದರಷ್ಟು ಮಂದಿ ಭಾರತೀಯರಿದ್ದಾರೆ ಎಂದು ಹೊಸ ಅಧ್ಯಯನವೊಂದರಿಂದ ತಿಳಿದುಬಂದಿದೆ.

ಆಸ್ಟ್ರೇಲಿಯಾದ ಮೊನಾಶ್ ವಿಶ್ವವಿದ್ಯಾಲಯವು ಈ ಅಧ್ಯಯನ ನಡೆಸಿದೆ. 1990ರಿಂದ 2019ರ ವರೆಗಿನ ಅವಧಿಯನ್ನು ಅಧ್ಯಯನಕ್ಕೆ ಪರಿಗಣಿಸಿದೆ. ಪ್ರತಿವರ್ಷ ಬೇಸಿಗೆಯಲ್ಲಿ 1.53 ಲಕ್ಷ ಜನರು ಮೃತಪಡುತ್ತಾರೆ. ಅಂದರೆ, 1 ಕೋಟಿ ಜನರಲ್ಲಿ 236 ಜನರು ಬಿಸಿಗಾಳಿಯಿಂದ ಸಾವಿಗೀಡಾಗುತ್ತಾರೆ. ಅವರಲ್ಲಿ ಅರ್ಧದಷ್ಟು ಜನರು ಏಷ್ಯಾದವರು. ಶೇ 30ರಷ್ಟು ಜನರು ಯುರೋಪ್‌ನವರು ಎಂದು ಅಧ್ಯಯನ ಬೊಟ್ಟು ಮಾಡಿದೆ.
ಒಣ ಹವೆ ಮತ್ತು ಕಡಿಮೆ ಅಥವಾ ಮಧ್ಯಮ ಆದಾಯವಿರುವ ದೇಶಗಳಲ್ಲೇ ಬಿಸಿಗಾಳಿಗೆ ಸಂಬಂಧಿಸಿದ ಸಾವುಗಳು ಹೆಚ್ಚು ಸಂಭವಿಸುತ್ತಿವೆ. ಭಾರತದ ನಂತರದ ಸ್ಥಾನದಲ್ಲಿ ಚೀನಾ ಮತ್ತು ರಷ್ಯಾ ದೇಶಗಳಿವೆ.
ಬಿಸಿಗಾಳಿಯ ಪರಿಣಾಮಗಳನ್ನು ಎದುರಿಸಲು ಸರ್ಕಾರಗಳು ಆರೋಗ್ಯ ವಲಯದಲ್ಲಿ ಸುಧಾರಣೆ ತಂದಿರುವುದು ಅಧ್ಯಯನದಲ್ಲಿ ತಿಳಿದುಬಂದಿದೆ. ಬಿಸಿಗಾಳಿಯಿಂದ ಉಂಟಾಗುವ ತಕ್ಷಣದ ಸಮಸ್ಯೆಗಳನ್ನು ಪರಿಹರಿಸುವ ದಿಸೆಯಲ್ಲಿ 'ಸಮಗ್ರ ಮಾರ್ಗಸೂಚಿ' ರೂಪಿಸುವ ಅಗತ್ಯವಿದೆ. ದೀರ್ಘಾವಧಿ ಕಾರ್ಯಸೂಚಿಗಳನ್ನು ರೂಪಿಸುವುದರಿಂದ ಸಮುದಾಯಗಳು ಬಿಸಿಗಾಳಿಯಿಂದ ತತ್ತರಿಸಿಸುವುದನ್ನು ತಡೆಯಬಹುದಾಗಿದೆ ಎಂದು ಅಧ್ಯಯನದಲ್ಲಿ ಹೇಳಲಾಗಿದೆ.
ಹವಾಮಾನ ಬದಲಾವಣೆ ತಗ್ಗಿಸುವ ಯೋಜನೆ, ಉಷ್ಣಾಂಶ ಕಾರ್ಯಯೋಜನೆ, ನಗರ ಯೋಜನೆ ಮತ್ತು ಹಸಿರು ವಲಯ, ಸಾಮಾಜಿಕ ಸಹಕಾರ ಕಾರ್ಯಕ್ರಮಗಳಂಥ ದೀರ್ಘಾವಧಿ ಕಾರ್ಯಸೂಚಿಗಳನ್ನು ರೂಪಿಸುವ ಅಗತ್ಯವಿದೆ ಎಂದು ಸಂಶೋಧಕರು ಹೇಳಿದ್ದಾರೆ.