ಮಲಪ್ಪುರಂ: ಪ್ಲಸ್ ಒನ್ ಸೀಟು ಬಿಕ್ಕಟ್ಟು ಉಲ್ಬಣಿಸುತ್ತಿರುವುದರಿಂದ ಮಲಪ್ಪುರಂ ಜಿಲ್ಲೆಯ ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ. ಮಲಪ್ಪುರಂ ಜಿಲ್ಲೆ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಎ+ ಪಡೆದ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳನ್ನು ಹೊಂದಿದ ಜಿಲ್ಲೆಯಾಗಿದೆ. ಆದರೆ ಮಲಪ್ಪುರಂ ಉನ್ನತ ವ್ಯಾಸಂಗಕ್ಕೆ ಕಡಮೆ ಸಂಖ್ಯೆಯ ಸೀಟುಗಳನ್ನು ಹೊಂದಿದೆ. ಇದರಿಂದ ವಿದ್ಯಾರ್ಥಿಗಳು ಆತಂಕಗೊಂಡಿದ್ದಾರೆ.
ಜಿಲ್ಲೆಯಲ್ಲಿ 79901 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 79730 ಮಂದಿ ಉನ್ನತ ಶಿಕ್ಷಣಕ್ಕೆ ಅರ್ಹತೆ ಪಡೆದಿದ್ದಾರೆ. ಈ ಪೈಕಿ 11974 ಮಂದಿ ಎಲ್ಲ ವಿಷಯಗಳಲ್ಲಿ ಎ ಪ್ಲಸ್ ಪಡೆದಿದ್ದಾರೆ. ಜಿಲ್ಲೆಯಲ್ಲಿ ಈ ಬಾರಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 171 ಮಂದಿ ಮಾತ್ರ ಅನುತ್ತೀರ್ಣರಾಗಿದ್ದಾರೆ. ಬಹುತೇಕರು ವಿವಿಧ ಕಾರಣಗಳಿಂದ ಒಂದೋ ಎರಡೋ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗಿಲ್ಲ. ಅವರಷ್ಟೇ ಅನುತ್ತೀರ್ಣರಾಗಿದ್ದಾರೆ. ಇದೇ ವೇಳೆ ಜಿಲ್ಲೆಯಲ್ಲಿ ಸರ್ಕಾರಿ ಅನುದಾನಿತ ವಲಯದಲ್ಲಿ ಕೇವಲ 52,600 ಸೀಟುಗಳಿವೆ. ಅಂದರೆ 27,130 ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕೆ ಸೀಟು ಲಭಿಸುವುದಿಲ್ಲ. ಅನುದಾನ ರಹಿತ ವಲಯದ ಶಾಲೆಗಳಲ್ಲಿ 11300 ಸೀಟುಗಳನ್ನು ಸೇರಿಸಿದರೂ ಹೆಚ್ಚಿನ ಶುಲ್ಕ ಪಾವತಿಸಿ ಸರ್ಕಾರದ ನೆರವು ಸಿಗದೆ 15830 ಮಕ್ಕಳು ಹೊರಗುಳಿದಿದ್ದಾರೆ. ಸಿಬಿಎಸ್‍ಇ ಮತ್ತು ಐಸಿಎಸ್‍ಇ ಸೇರಿದಂತೆ ಇತರ ಪಠ್ಯಕ್ರಮಗಳಿಗೆ ಹಾಜರಾದ 6000 ವಿದ್ಯಾರ್ಥಿಗಳ ಸೇರ್ಪಡೆಯೊಂದಿಗೆ ಅಂಕಿ ಮತ್ತೆ ಏರಲಿದೆ.
ಸೀಟು ಬಿಕ್ಕಟ್ಟಿಗೆ ಪರಿಹಾರ ಎಂದು ರಾಜ್ಯ ಸರ್ಕಾರ ಎತ್ತಿ ಹಿಡಿಯುತ್ತಿರುವ ವಿಎಚ್‍ಎಸ್‍ಸಿ, ಐಟಿಐ, ಪಾಲಿಟೆಕ್ನಿಕ್‍ನಂತಹ ಎಲ್ಲ ಕೋರ್ಸ್‍ಗಳಲ್ಲಿಯೂ ಕೇವಲ 4800 ಸೀಟುಗಳಿವೆ. ಜಿಲ್ಲೆಯ ಎಲ್ಲ ತರಗತಿಗಳಲ್ಲಿ 65 ವಿದ್ಯಾರ್ಥಿಗಳು ಕಿಕ್ಕಿರಿದು ತುಂಬಿದ್ದರೂ 16000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸೀಟು ಸಿಗದೆ ಹೊರಗಿದ್ದಾರೆ. ಎಂದಿನಂತೆ, ಸರ್ಕಾರವು ಈ ವರ್ಷವೂ ತಾತ್ಕಾಲಿಕ ಬ್ಯಾಚ್‍ಗಳು ಮತ್ತು ಸೀಟು ಹೆಚ್ಚಳವನ್ನು ಘೋಷಿಸಿದರೂ, ಇದ್ಯಾವುದೂ ದೀರ್ಘಕಾಲದ ಬಿಕ್ಕಟ್ಟನ್ನು ಪರಿಹರಿಸಲು ಸಾಧ್ಯವಿಲ್ಲ.
ಮೂಲಸೌಕರ್ಯ ಅಭಿವೃದ್ಧಿಯಾಗದೆ ಸೀಟು ಹೆಚ್ಚಿಸಿದರೆ ವಿದ್ಯಾರ್ಥಿಗಳ ಕಲಿಕೆ ಹಿನ್ನಡೆಯಾಗುತ್ತದೆ ಎನ್ನುತ್ತಾರೆ ಶಿಕ್ಷಕರು.