ಕಾಸರಗೋಡು: ಜಿಲ್ಲೆಯಲ್ಲಿ ಮುಂಗಾರು ಪೂರ್ವ ಸ್ವಚ್ಛತಾ ಕಾರ್ಯಗಳ ಪ್ರಗತಿ ಪರಿಶೀಲನೆ ನಿಟ್ಟಿನಲ್ಲಿ ಮಾಲಿನ್ಯಮುಕ್ತ ನವ ಕೇರಳ ಅಭಿಯಾನದ ಅಂಗವಾಗಿ ಸೆಕ್ರೆಟೇರಿಯೆಟ್ ಹಾಗೂ ಹಸಿರು ಕೇರಳ ಏಕೋಪನಾ ಸಮಿತಿಯ ಸಭೆ ಜಿಲ್ಲಾಧಿಖಾರಿ ಸಭಾಂಗಣದಲ್ಲಿ ಜರುಗಿತು. ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ಅಧ್ಯಕ್ಷತೆ ವಹಿಸಿದ್ದರು.
ಸ್ಥಳೀಯಾಡಳಿತ ಇಲಾಖೆ ಜಂಟಿ ನಿರ್ದೇಶಕ ಜೇಸನ್ ಮ್ಯಾಥ್ಯೂ, ನವಕೇರಳ ಮಿಷನ್ ಜಿಲ್ಲಾ ಸಂಯೋಜಕ ಕೆ.ಬಾಲಕೃಷ್ಣನ್ ಮತ್ತು ಜಿಲ್ಲಾ ಶುಚಿತ್ವ ಮಿಷನ್ ಸಂಯೋಜಕಿ ಎ.ಲಕ್ಷ್ಮಿ ವರದಿ ಮಂಡಿಸಿದರು. ಬೇಸಿಗೆ ರಜೆಯ ನಂತರ ಶಾಲೆಗಳನ್ನು ತೆರೆಯುವ ಪೂರ್ವಭಾವಿಯಾಗಿ ಮೇ 27ರಿಂದ 29ರ ವರೆಗೆ ಹಸಿರು ವಿದ್ಯಾಲಯ-ಶುಚಿತ್ವ ವಿದ್ಯಾಲಯ' ಎಂಬ ಘೋಷಣೆಯೊಂದಿಗೆ ಎಲ್ಲಾ ಶಿಕ್ಷಣ ಸಂಸ್ಥೆಗಳ ಆಸುಪಾಸು ಶುಚೀಕರಣ ನಡೆಸುವಂತೆ ಸೂಚಿಸಲಾಯಿತು.
ಶಾಲೆಗಳು ಪುನರಾರಂಭಗೊಳ್ಳುವ ಪೂರ್ವಭಾವಿಯಾಗಿ ಕುಟುಂಬಶ್ರೀ ಮಿಷನ್, ಶಾಲಾ ರಕ್ಷಕ-ಶಿಕ್ಷಕ ಸಂಘ ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಸಹಕಾರದೊಂದಿಗೆ ಎಲ್ಲ ಶಾಲೆಗಳ ಸುತ್ತಮುತ್ತ ಹಾಗೂ ತರಗತಿ ಕೊಠಡಿಗಳನ್ನು ಸ್ವಚ್ಛಗೊಳಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ಮೇ 26 ರಂದು ಮಂಜೇಶ್ವರದಿಂದ ವಲಿಯಪರಂ ವರೆಗೆ ವಿವಿಧ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬೀಚ್ ಕ್ಲೀನಿಂಗ್ ಕಾರ್ಯಕ್ರಮ ನಡೆಯಲಿದೆ, 'ಮಂಜೇಶ್ವರ, ಮಂಗಲ್ಪಾಡಿಯಲ್ಲಿ ಕುಟುಂಬಶ್ರೀ ಜಿಲ್ಲಾ ಮಿಷನ್, ಮೊಗ್ರಾಲ್ ಪುತ್ತೂರು ಮತ್ತು ಕುಂಬಳೆ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಸಹಕಾರದೊಂದಿಗೆ ಬೀಚ್ ಸ್ವಚ್ಛತಾಕಾರ್ಯ ನಡೆಯಲಿದೆ.
ಶುಚಿತ್ವ ಮಿಷನ್ ಘನತ್ಯಾಜ್ಯ ನಿರ್ವಹಣೆ ಯೋಜನೆಯ ಕಾರ್ಯಕ್ರಮ ನಿರ್ವಾಹಕ ಸೂರಜ್, ಸಹಾಯಕ ಇಂಜಿನಿಯರ್ ದಿವ್ಯಾ, ಮಾಲಿನ್ಯ ನಿಯಂತ್ರಣ ಮಂಡಳಿ ಪ್ರತಿನಿಧಿ ಪಿ.ವಿ.ಸಿದ್ಧಾರ್ಥ್ ಮೊದಲದವರು ಭಾಗವಹಿಸಿದ್ದರು.