ಉತ್ತರಾಖಂಡ್: ಹಿಮಾಲಯದ ತಪ್ಪಲಿನ ರಾಜ್ಯ ಉತ್ತರಾಖಂಡದಲ್ಲಿ ಸುಮಾರು ಹದಿನೈದು ದಿನಗಳ ಹಿಂದೆ ಮೇ 10 ರಂದು ಆರಂಭವಾದ ಜಾರ್ ಧಾಮ್ ಯಾತ್ರೆಯಲ್ಲಿ ಇಲ್ಲಿಯವರೆಗೆ 50 ಕ್ಕೂ ಹೆಚ್ಚು ಯಾತ್ರಿಕರು ಸಾವನ್ನಪ್ಪಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದ ಗರ್ವಾಲ್ ಕಮಿಷನರ್ ವಿನಯ್ ಶಂಕರ್ ಪಾಂಡೆ, ಇದುವರೆಗೆ 52 ಚಾರ್ ಧಾಮ್ ಯಾತ್ರಿಕರು ಸಾವನ್ನಪ್ಪಿದ್ದಾರೆ. ಇವರಲ್ಲಿ ಹೆಚ್ಚಿನವರು 60 ವರ್ಷಕ್ಕೂ ಮೇಲ್ಪಟ್ಟವರಾಗಿದ್ದು, ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಗಂಗೋತ್ರಿಯಲ್ಲಿ ಮೂವರು, ಯಮುನೋತ್ರಿಯಲ್ಲಿ 12, ಬದರಿನಾಥದಲ್ಲಿ 14 ಮತ್ತು ಕೇದಾರನಾಥದಲ್ಲಿ 23 ಭಕ್ತರು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದರು.
50 ವರ್ಷ ಮೇಲ್ಪಟ್ಟ ಭಕ್ತರಿಗೆ ವೈದ್ಯಕೀಯ ತಪಾಸಣೆ ಕಡ್ಡಾಯಗೊಳಿಸಲಾಗಿದೆ. ಹಿಮಾಲಯದ ದೇವಾಲಯಗಳಿಗೆ ಹೋಗುವ ಮಾರ್ಗದಲ್ಲಿ ತಪಾಸಣೆ ಮಾಡಲಾಗುತ್ತಿದೆ. ಯಾತ್ರಾರ್ಥಿಗಳು ವೈದ್ಯಕೀಯವಾಗಿ ಸಾಕಷ್ಟು ಫಿಟ್ ಆಗಿಲ್ಲದಿದ್ದರೆ ಪ್ರಯಾಣಿಸದಂತೆ ಸೂಚಿಸಲಾಗಿದೆ. ಆದಾಗ್ಯೂ, ಅವರು ಯಾತ್ರೆ ಮುಂದುವರಿಸಲು ಒತ್ತಾಯಿಸಿದರೆ, ಫಾರ್ಮ್ ಭರ್ತಿ ಮಾಡಿದ ನಂತರ ಮುಂದೆ ಹೋಗಲು ಅವರಿಗೆ ಅನುಮತಿಸಲಾಗುತ್ತದೆ ಎಂದರು.
ಚಾರ್‌ಧಾಮ್ ಯಾತ್ರೆಯ ವ್ಯವಸ್ಥೆಯನ್ನು ಇನ್ನಷ್ಟು ಸುಧಾರಿಸಲು ನಿರಂತರ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಇದುವರೆಗೆ ಒಂಬತ್ತು ಲಕ್ಷದ 67 ಸಾವಿರದ 302 ಭಕ್ತರು ಚಾರ್‌ಧಾಮ್‌ಗೆ ಭೇಟಿ ನೀಡಿದ್ದಾರೆ ಎಂದು ಅವರು ಮಾಹಿತಿ ನೀಡಿದರು.