ಎರ್ನಾಕುಳಂ: ವೆಂಗೂರಿನಲ್ಲಿ 180 ಮಂದಿಗೆ ಹಳದಿ ಜ್ವರ ತಗುಲಿರುವ ಘಟನೆಯಲ್ಲಿ ಜಲ ಪ್ರಾಧಿಕಾರದಿಂದ ಪೂರೈಕೆಯಾಗುವ ನೀರು ಶುದ್ಧೀಕರಿಸದಿರುವುದು ಕಂಡುಬಂದಿದೆ.
ಶುದ್ಧೀಕರಿಸದ ನೀರು ಕುಡಿದು 180 ಮಂದಿಗೆ ಜಾಂಡೀಸ್ ಕಾಣಿಸಿಕೊಂಡಿದ್ದು, ಈ ಬಗ್ಗೆ ತುರ್ತು ಸಭೆ ನಡೆಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಅಸ್ವಸ್ಥರ ಚಿಕಿತ್ಸೆಗೆ ಸಂಬಂಧಿಸಿದಂತೆ ನೆರವು ನೀಡಲು ಸಭೆ ನಿರ್ಧರಿಸಬಹುದು.
ವೆಂಗೂರಿನ ಬಹುತೇಕ ಜನರು ಜಲ ಪ್ರಾಧಿಕಾರದಿಂದ ಪೂರೈಕೆಯಾಗುವ ನೀರನ್ನೇ ಅವಲಂಬಿಸಿದ್ದಾರೆ. ಆದರೆ ಜಲ ಪ್ರಾಧಿಕಾರ ಶುದ್ಧೀಕರಿಸದ ನೀರನ್ನು ಮನೆಗಳಿಗೆ ಪೂರೈಸಿದೆ. ಕಾಯಿಸದ ಈ ನೀರು ಕುಡಿದವರಿಗೆ ಕಾಮಾಲೆ ಕಾಣಿಸಿಕೊಂಡಿದೆ.
ಪೀಡಿತರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲಿ ಮೂವರ ಸ್ಥಿತಿ ಚಿಂತಾಜನಕವಾಗಿದೆ. ಈ ಪಂಚಾಯಿತಿಯಲ್ಲಿ ಈ ಹಿಂದೆ ಹಳದಿ ಜ್ವರಕ್ಕೆ ಇಬ್ಬರು ಮೃತಪಟ್ಟಿದ್ದರು. ಮೃತರನ್ನು ಮುಕ್ಕುಳದ ನಿವಾಸಿಗಳಾದ ಸಜೀವನ್ ಮತ್ತು ಜಾಲಿ ಎಂದು ಗುರುತಿಸಲಾಗಿದೆ. ಜಲ ಪ್ರಾಧಿಕಾರದ ಗಂಭೀರ ವೈಫಲ್ಯದ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದರು.