ಠಾಣೆ, ಮಹಾರಾಷ್ಟ್ರ: ನೂರು ವರ್ಷಗಳ ಹಿಂದೆ ಬ್ರಿಟಿಷ್ ಭಾರತದಲ್ಲಿನ ನ್ಯಾಯಾಧೀಶರೊಬ್ಬರು ಕಳ್ಳತನ ಪ್ರಕರಣವೊಂದರಲ್ಲಿ ನಾಲ್ವರಿಗೆ ಶಿಕ್ಷೆ ವಿಧಿಸಿದ ಆದೇಶದ ಪತ್ರ ಮಹಾರಾಷ್ಟ್ರದ ಠಾಣೆ ನಗರದ ವಕೀಲರೊಬ್ಬರಿಗೆ ಸಿಕ್ಕಿದೆ.
ವಕೀಲರಾದ ಪುನೀತ್ ಮಹಿಮಾಕರ್ ಅವರಿಗೆ ಈ ಅಪರೂಪದ ಪತ್ರ ಸಿಕ್ಕಿದೆ.
ಆದೇಶ ಪತ್ರದಲ್ಲಿ ಏನಿದೆ?
ಠಾಣೆ ಬಳಿಯ ಬ್ರಿಟಿಷ್ ವ್ಯಕ್ತಿ ಬೋಸ್ಟಿವ್ ಎಲ್ಲಿಸ್ ಆಯಂಡರ್‌ಡೆನ್ ಎಂಬುವರ ತೋಟದಿಂದ ನಾಲ್ವರು ವ್ಯಕ್ತಿಗಳು (ಎಂಜಲೋ ಅಲ್ವಾರಸ್ ಹಾಗೂ ಇತರರು) 185 ಮಾವಿನಕಾಯಿಗಳನ್ನು ಕದ್ದಿದ್ದರು. ಈ ನಾಲ್ವರ ಮೇಲೆ ಐಪಿಸಿ ಸೆಕ್ಷನ್ 379/109 ಅಡಿ ಪ್ರಕರಣ ದಾಖಲಾಗಿತ್ತು. ಇವರ ಮೇಲಿನ ಆರೋಪವನ್ನು ಸಾಬೀತುಪಡಿಸಲಾಗಿತ್ತು.
ಈ ಪ್ರಕರಣದ ವಿಚಾರಣೆ ನಡೆಸಿ 1924ರ ಜುಲೈ 5 ರಂದು ಆದೇಶ ಪ್ರಕಟಿಸಿದ್ದ ನ್ಯಾಯಾಧೀಶ ಟಿ.ಎ. ಫರ್ನಾಂಡೀಸ್ ಎನ್ನುವರು, 'ಮಾವಿನ ಕಾಯಿಗಳನ್ನು ಕದ್ದ ಆರೋಪ ಸಾಬೀತಾಗಿರುವುದರಿಂದ ನಾಲ್ವರಿಗೂ ಶಿಕ್ಷೆ ವಿಧಿಸುವುದನ್ನು ನಾನು ಒಪ್ಪಿಕೊಳ್ಳುತ್ತೇನೆ. ಆದರೆ, ಅಪರಾಧಿಗಳು ಯುವಕರಾಗಿರುವುದರಿಂದ ಹಾಗೂ ಅವರು ಈ ಹಿಂದೆ ಯಾವುದೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗದೇ ಇರುವುದರಿಂದ ಅವರಿಗೆ ಜೈಲು ಶಿಕ್ಷೆ ವಿಧಿಸದೇ ಅವರನ್ನು ಬಿಡುಗಡೆ ಮಾಡಲು ಆದೇಶಿಸುತ್ತೇನೆ. ಅವರು ಉತ್ತಮ ಜೀವನ ರೂಪಿಸಿಕೊಳ್ಳಬೇಕು' ಎಂದು ಆದೇಶ ಪ್ರಕಟಿಸಿದ್ದರು.
ಈ ಅಪರೂಪದ ಆದೇಶ ಪತ್ರದ ಬಗ್ಗೆ ಸುದ್ದಿಸಂಸ್ಥೆ ಪಿಟಿಐ ಜೊತೆ ಮಾತನಾಡಿರುವ ವಕೀಲ ಪುನೀತ್ ಮಹಿಮಾಕರ್ ಅವರು, 'ಬಹುಶಃ ನಾನಿದ್ದ ಮನೆಯಲ್ಲಿ ಈ ಹಿಂದೆ ಇದ್ದ ವ್ಯಕ್ತಿಗಳು ಪತ್ರವನ್ನು ಬಿಟ್ಟು ಹೋಗಿರಬಹುದು. ಅದರ ಜೊತೆ ಕೆಲವು ಆಸ್ತಿ ದಾಖಲೆಗಳೂ ಸಿಕ್ಕಿವೆ. ಅದರಲ್ಲೂ ಟಿ.ಎ. ಫರ್ನಾಂಡೀಸ್ ನ್ಯಾಯಾಧೀಶರ ಈ ಆದೇಶ ಪ್ರತಿಯನ್ನು ಸಂರಕ್ಷಿಸಿ ಇಡುತ್ತೇನೆ' ಎಂದು ತಿಳಿಸಿದ್ದಾರೆ.