ನವದೆಹಲಿ: ದೇಶದಲ್ಲಿ ಮುಂದಿನ ಎರಡು ಮೂರು ವರ್ಷಗಳಲ್ಲಿ ನಕ್ಸಲ್ ಸಮಸ್ಯೆ ಕೊನೆಗೊಳ್ಳುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಶನಿವಾರ ತಡ ರಾತ್ರಿ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಅವರು ಮಾತನಾಡಿದರು.
ಛತ್ತೀಸಗಢ ರಾಜ್ಯದ ಒಂದು ಸಣ್ಣ ಪ್ರದೇಶವನ್ನು ಹೊರತುಪಡಿಸಿದರೆ ದೇಶದಲ್ಲಿ ನಕ್ಸಲ್ ಪಿಡುಗು ಇಲ್ಲ, ಎರಡು ಮೂರು ವರ್ಷಗಳಲ್ಲಿ ಈ ಸಮಸ್ಯೆ ಸಂಪೂರ್ಣವಾಗಿ ಕೊನೆಗೊಳ್ಳುತ್ತದೆ ಎಂದು ಹೇಳಿದರು.
ದೇಶದಾದ್ಯಂತ ನಕ್ಸಲ್ ಪಿಡುಗನ್ನು ನಿರ್ಮೂಲನೆ ಮಾಡಲಾಗಿದೆ. ಈ ಹಿಂದೆ ಕೆಲವರು ಪಶುಪತಿನಾಥದಿಂದ ತಿರುಪತಿಯವರೆಗೂ ನಕ್ಸಲ್ ಕಾರಿಡಾರ್ ಎಂದು ಹೇಳುತ್ತಿದ್ದರು. ಈ ಕೂಗು ಈಗ ಇಲ್ಲ ಎಂದರು. ಜಾರ್ಖಂಡ್ ನಕ್ಸಲ್‌ನಿಂದ ಸಂಪೂರ್ಣವಾಗಿ ಮುಕ್ತವಾಗಿದೆ. ಹಾಗೇ ಬಿಹಾರ, ಒಡಿಶಾ, ತೆಲಂಗಾಣ ಮತ್ತು ಆಂಧ್ರಪ್ರದೇಶಗಳು ಸಹ ಮುಕ್ತವಾಗಿವೆ. ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶ ರಾಜ್ಯಗಳು ಸಹ ನಕ್ಸಲ್‌ನಿಂದ ಮುಕ್ತಿಪಡೆದಿವೆ ಎಂದರು.
ಛತ್ತೀಸಗಢ ರಾಜ್ಯದ ಕೆಲವು ಪ್ರದೇಶಗಳಲ್ಲಿ ನಕ್ಸಲರು ಇನ್ನೂ ಸಕ್ರಿಯರಾಗಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಇಲ್ಲಿ ಕಾಂಗ್ರೆಸ್ ಆಡಳಿತದಲ್ಲಿ ಇದ್ದ ಕಾರಣ ನಕ್ಸಲ್ ನಿರ್ಮೂಲನೆ ಮಾಡಲು ಸಾಧ್ಯವಾಗಿಲ್ಲ ಎಂದರು.
ಐದು ತಿಂಗಳ ಹಿಂದೆ ಛತ್ತೀಸಗಢದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ, ರಾಜ್ಯವನ್ನು ನಕ್ಸಲ್‌ನಿಂದ ಮುಕ್ತಗೊಳಿಸುವ ಕೆಲಸ ಆರಂಭವಾಗಿದೆ ಎಂದು ಹೇಳಿದರು.
ಕೇವಲ 5 ತಿಂಗಳ ಅವಧಿಯಲ್ಲಿ 125 ನಕ್ಸಲರನ್ನು ಹತ್ಯೆ ಮಾಡಲಾಗಿದೆ. 352ಕ್ಕೂ ಹೆಚ್ಚು ನಕ್ಸಲರನ್ನು ಬಂಧಿಸಲಾಗಿದೆ. ಸುಮಾರು 175 ಮಂದಿ ಶರಣಾಗಿದ್ದಾರೆ ಎಂದು ಅಮಿತ್ ಶಾ ಮಾಹಿತಿ ನೀಡಿದರು.