ವಿಶ್ವಸಂಸ್ಥೆ: ವಿದೇಶದಲ್ಲಿರುವ ಭಾರತೀಯ ವಲಸೆ ನೌಕರರಿಂದ ಭಾರತದಲ್ಲಿರುವ ಅವರ ಕುಟುಂಬಗಳು 2022ನೇ ಸಾಲಿನಲ್ಲಿ ₹9.3 ಲಕ್ಷ ಕೋಟಿ (111 ಬಿಲಿಯನ್ ಡಾಲರ್) ಅನ್ನು ಪಡೆದಿವೆ. ಈ ಮೂಲಕ ಅತಿ ಹೆಚ್ಚು ಹಣ ಪಡೆದ ದೇಶವಾಗಿ ಹೊರಹೊಮ್ಮಿದೆಯಷ್ಟೇ ಅಲ್ಲದೆ, 100 ಬಿಲಿಯನ್‌ಗಿಂತಲೂ ಹೆಚ್ಚು ಡಾಲರ್ ಸ್ವೀಕರಿಸಿದ ರಾಷ್ಟ್ರವಾಗಿದೆ ಎಂದು ವಿಶ್ವಸಂಸ್ಥೆಯ ವಲಸೆ ಏಜೆನ್ಸಿ ಹೇಳಿದೆ.
ವಲಸಿಗರ ಕುರಿತಾದ ಅಂತರರಾಷ್ಟ್ರೀಯ ಸಂಸ್ಥೆಯು (ಐಒಎಂ) ಮಂಗಳವಾರ ತನ್ನ 2024ನೇ ಸಾಲಿನ ವಿಶ್ವ ವಲಸಿಗರ ವರದಿಯನ್ನು ಬಿಡುಗಡೆ ಮಾಡಿದೆ. ಅದರಲ್ಲಿ 2022ನೇ ಸಾಲಿನಲ್ಲಿ ಭಾರತ, ಮೆಕ್ಸಿಕೊ, ಚೀನಾ, ಫಿಲಿಪ್ಪೀನ್ಸ್ ಮತ್ತು ಫ್ರಾನ್ಸ್ ದೇಶಗಳು ಅತಿ ಹೆಚ್ಚು ಹಣ ಪಡೆದ ದೇಶಗಳಾಗಿವೆ ಎಂದು ಉಲ್ಲೇಖಿಸಲಾಗಿದೆ.
ಈ ವರದಿ ಪ್ರಕಾರ, 2010ರಲ್ಲಿ 4.4 ಲಕ್ಷ ಕೋಟಿ (53.48 ಬಿಲಿಯನ್ ಡಾಲರ್), 2015ರಲ್ಲಿ 5.7 ಲಕ್ಷ ಕೋಟಿ (68.91 ಬಿಲಿಯನ್ ಡಾಲರ್), 2020ರಲ್ಲಿ 6.9 ಲಕ್ಷ ಕೋಟಿ (83.15 ಬಿಲಿಯನ್ ಡಾಲರ್) ಪಡೆಯುವುದರೊಂದಿಗೆ, ವಿದೇಶದಲ್ಲಿ ನೆಲೆಸಿರುವ ಭಾರತೀಯರಿಂದ ಕುಟುಂಬಗಳು ಪಡೆದ ಹಣದ ಪಟ್ಟಿಯಲ್ಲಿ ದೇಶ ಮೊದಲ ಸ್ಥಾನವನ್ನೇ ಅಲಂಕರಿಸಿತ್ತು. ಆದರೆ, 202ರಲ್ಲಿ ಮೊದಲ ಬಾರಿಗೆ 100 ಬಿಲಿಯನ್ ಡಾಲರ್ ತಲುಪಿದೆ.
ವಿಶ್ವದಲ್ಲೇ ಅಂತರರಾಷ್ಟ್ರೀಯ ಮಟ್ಟದಿಂದ ಹಣ ಪಡೆಯುವ ದೇಶಗಳ ಪಟ್ಟಿಯಲ್ಲಿ ದಕ್ಷಿಣ ಏಷ್ಯಾ ದೇಶಗಳಾದ ಭಾರತ, ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳು ಮೊದಲ 10ರಲ್ಲಿ ಸ್ಥಾನ ಪಡೆದಿವೆ.
ವಲಸಿಗ ನೌಕರರು ಕಳುಹಿಸಿಕೊಡುವ ಈ ಹಣವು ಆಯಾ ದೇಶಗಳಲ್ಲಿ ವಾಸಿಸುವ ಆ ನೌಕರರ ಹಲವು ಕುಟುಂಬಸ್ಥರಿಗೆ ಜೀವನಾಧಾರವಾಗಿದೆ. ಆದರೆ, ಭಾರತ ಸೇರಿದಂತೆ ಇನ್ನಿತರ ದೇಶಗಳ ವಲಸಿಗ ಕಾರ್ಮಿಕರು ಹಣಕಾಸು ದುರುಪಯೋಗ, ವಲಸೆ ವೆಚ್ಚದ ಪರಿಣಾಮವಾಗಿ ಯಥೇಚ್ಛವಾದ ಸಾಲದ ಸುಳಿಗೆ ಸಿಲುಕುವುದು, ಬೆದರಿಕೆ, ಕೆಲಸದ ಸ್ಥಳಗಳಲ್ಲಿ ಅವಾಚ್ಯ ಪದಗಳಿಂದ ನಿಂದನೆಗೊಳಗಾಗುವ ಸಂಕಷ್ಟಗಳಿಗೆ ಸಿಲುಕಿಕೊಳ್ಳುವಂತಾಗಿದೆ ಎಂದೂ ಈ ವರದಿಯಲ್ಲಿ ತಿಳಿಸಲಾಗಿದೆ.