ನವದೆಹಲಿ: 2024ರ ಲೋಕಸಭಾ ಚುನಾವಣೆಯ ನಾಲ್ಕು ಹಂತಗಳು ಪೂರ್ಣಗೊಂಡಿದ್ದು, ಸೋಮವಾರ 5ನೇ ಹಂತದಲ್ಲಿ ಒಟ್ಟು 8 ರಾಜ್ಯಗಳಲ್ಲಿ ಮತದಾನ ನಡೆಯುತ್ತಿದೆ. ಬೆಳಗ್ಗೆ 7ರಿಂದ ಶುರುವಾಗಿರುವ ಮತದಾನ ಸಂಜೆ 6ರ ವರೆಗೆ ಮುಂದುವರಿಯಲಿದ್ದು, ಈ ವರೆಗೂ ಶೇ. 47.53 ರಷ್ಟು ಮತದಾನವಾಗಿದೆ
ಲಡಾಖ್‌ನಲ್ಲಿ ಅತಿ ಹೆಚ್ಚು ಮತದಾನ (ಶೇ 61.26), ಪಶ್ಚಿಮ ಬಂಗಾಳ (ಶೇ 62.72), ಜಾರ್ಖಂಡ್ (ಶೇ 53.90), ಉತ್ತರ ಪ್ರದೇಶ (ಶೇ 47.55), ಒಡಿಶಾ (ಶೇ 48.95), ಜಮ್ಮು ಮತ್ತು ಕಾಶ್ಮೀರ (ಶೇ. 44.90), ಬಿಹಾರ (ಶೇ. 45.33) ಮತ್ತು ಮಹಾರಾಷ್ಟ್ರ (ಶೇ. 38.77) ರಷ್ಟು ಮತದಾನವಾಗಿದೆ. ಮಧ್ಯಾಹ್ನ 3 ಗಂಟೆಯವರೆಗೆ ಮುಂಬೈಯಲ್ಲಿ ಮತದಾನದ ಪ್ರಮಾಣ ಶೇ.40 ದಾಟುವಲ್ಲಿ ವಿಫಲವಾಗುವುದರೊಂದಿಗೆ ನಿರಾಸೆಯನ್ನು ಮುಂದುವರೆಸಿದೆ.
5ನೇ ಹಂತದಲ್ಲಿ ಬಿಹಾರದ ಐದು, ಜಮ್ಮುಕಾಶ್ಮೀರದ ಒಂದು, ಜಾರ್ಖಂಡ್ನ ಮೂರು ಹಾಗೂ ಲಡಾಕ್ನ ಒಂದು, ಮಹಾರಾಷ್ಟ್ರದ 13 ಹಾಗೂ ಒಡಿಶಾದ ಐದು, ಉತ್ತರಪ್ರದೇಶದ 14 ಹಾಗೂ ಪಶ್ಚಿಮಬಂಗಾಳದ ಏಳು ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ಪ್ರಕ್ರಿಯೆ ನಡೆಯುತ್ತಿದೆ.
49 ಕ್ಷೇತ್ರಗಳಲ್ಲಿ ಒಟ್ಟು 695 ಅಭ್ಯರ್ಥಿಗಳು ಕಣದಲ್ಲಿದ್ದು, ಮಹಾರಾಷ್ಟ್ರದಲ್ಲಿ ಗರಿಷ್ಠ 264 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ.
ಹಿರಿಯ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ (ರಾಯ್ಬರೇಲಿ), ಕಿಶೋರಿ ಲಾಲ್ ಶರ್ಮಾ (ಆಮೇಠಿ), ಬಿಜೆಪಿಯ ಸ್ಮೃತಿ ಇರಾನಿ (ಆಮೇಥಿ), ಪಿಯೂಶ್ ಗೋಯಲ್ (ಮುಂಬೈ ಉತ್ತರ), ರಾಜನಾಥ ಸಿಂಗ್ (ಲಕ್ನೋ) ಹಾಗ ಚಿರಾಗ್ ಪಾಸ್ವಾನ್ (ಹಾಜಿಪುರ), 5ನೇ ಹಂತದ ಚುನಾವಣೆಯಲ್ಲಿ ಕಣದಲ್ಲಿರುವ ಪ್ರಮುಖ ಸ್ಪರ್ಧಿಗಳಾಗಿದ್ದಾರೆ.