ಬದಿಯಡ್ಕ: ಮುಳ್ಳೇರಿಯ ಹವ್ಯಕಮಂಡಲದ ವಿದ್ಯಾರ್ಥಿವಾಹಿನಿಯ ನೇತೃತ್ವದಲ್ಲಿ ನೀರ್ಚಾಲು ಸಮೀಪದ ಪುದುಕೋಳಿ ರಸ್ತೆಯ ಕೋಳಿಕ್ಕಜೆ ಸುಬ್ರಹ್ಮಣ್ಯ ಭಟ್ಟರ ನಿವಾಸ ಶ್ರೀಸದನದಲ್ಲಿ ಮಕ್ಕಳಿಗಾಗಿ ಜರಗುತ್ತಿರುವ ಜೀವನಬೋಧೆ ಶಿಬಿರ 2024ರಲ್ಲಿ ಭಾನುವಾರ ವಿವಿಧ ಪ್ರಾತ್ಯಕ್ಷಿಕೆಗಳನ್ನು ನೀಡಲಾಯಿತು.
ದನದ ಹಾಲಿನಿಂದ ತುಪ್ಪ ತಯಾರಿಸುವ ರೀತಿಯನ್ನು ಗಣೇಶ್ ಭಟ್ ಮುಣ್ಚಿಕ್ಕಾನ ವಿವರಿಸಿದರು. ಹಾಲಿಗೆ ಹೆಪ್ಪನ್ನು ಹಾಕಿ ಮೊಸರು ಮಾಡಿ, ಅದನ್ನು ಕಡೆದು ಬೆಣ್ಣೆಯನ್ನು ತೆಗೆದು ತುಪ್ಪ ತಯಾರಿಸುವುದನ್ನು ತೋರಿಸಿಕೊಟ್ಟರು. ಶ್ರೀಮಠದ ಮಾತೆಯರು ಹಾಡನ್ನು ಹಾಡುತ್ತಾ ಮೊಸರನ್ನು ಕಡೆಯುವ ರೀತಿಯನ್ನು ತೋರಿಸಿ ಮಕ್ಕಳಲ್ಲಿ ಮಾಡಿಸಿದರು. ವಿದ್ಯಾರ್ಥಿಗಳು ಅತ್ಯುತ್ಸಾಹದಿಂದ ಪಾಲ್ಗೊಂಡಿದ್ದರು. ಶ್ಯಾಮಪ್ರಸಾದ ಕುಳಮರ್ವ ನಿರೂಪಿಸಿದರು. ಶ್ರೀರಾಮಚಂದ್ರಾಪುರ ಮಠದ ವಿವಿಧ ವಲಯಗಳಿಂದ 60ಕ್ಕೂ ಮಿಕ್ಕ ಮಕ್ಕಳು ಶಿಬಿರದಲ್ಲಿ ಪಾಲ್ಗೊಂಡಿದ್ದರು.