ಜಮ್ಮು: ವಾಯುಪಡೆಯ ಬೆಂಗಾವಲು ವಾಹನದ ಮೇಲೆ ದಾಳಿ ನಡೆಸಿದ ಉಗ್ರರನ್ನು ಸದೆಬಡಿಯಲು ಜಮ್ಮು ಮತ್ತು ಕಾಶ್ಮೀರದ ಪೂಂಛ್ ಜಿಲ್ಲೆಯಾದ್ಯಂತ ಸೇನೆಯು ಸೋಮವಾರವೂ ತೀವ್ರ ಕಾರ್ಯಾಚರಣೆ ನಡೆಸಿದೆ.
ಶನಿವಾರ ಸಂಜೆ ಸುರನಕೋಟೆ ಸಮೀಪದ ಶಾಹಸಿತಾರ್ ಬಳಿ ದಾಳಿ ನಡೆಸಿದ್ದ ಉಗ್ರರು ಸಮೀಪದ ಅರಣ್ಯದೊಳಗೆ ಪರಾರಿಯಾಗಿದ್ದು, ಈ ಭಯೋತ್ಪಾದಕರ ಕುರಿತಂತೆ ಮಾಹಿತಿ ಸಂಗ್ರಹಿಸಲಿಕ್ಕಾಗಿ ಭದ್ರತಾ ಪಡೆಗಳು 20ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿವೆ.
ಶಾಹಸಿತಾರ್, ಗುರ್ಸೈ, ಸನೈ ಮತ್ತು ಶೇಂದರಾ ಟಾಪ್‌ನಲ್ಲಿ ಸ್ಥಳೀಯ ಪೊಲೀಸರೊಂದಿಗೆ ಭದ್ರತಾ ಪಡೆಗಳು ಜಂಟಿ ಕಾರ್ಯಾಚರಣೆ ಕೈಗೊಂಡಿದ್ದು ಉಗ್ರರ ಕುರುಹು ಪತ್ತೆಯಾಗಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಜೌರಿ ಜಿಲ್ಲೆಯ ಕಥುವಾ ಬಳಿ ಶಂಕಿತ ಮೂವರು ಭಯೋತ್ಪಾದಕರಿದ್ದಾರೆ ಎಂಬ ಸುಳಿವು ಸಿಗುತ್ತಿದ್ದಂತೆಯೇ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆಯನ್ನು ತೀವ್ರಗೊಳಿಸಿವೆ.
ಮೇ 25ರಂದು ಮತದಾನ ನಡೆಯಲಿರುವ ಅನಂತನಾಗ್ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಪೂಂಛ್, ರಜೌರಿ ಜಿಲ್ಲೆಗಳಲ್ಲಿ ಚೆಕ್‌ಪೋಸ್ಟ್ ಸ್ಥಾಪಿಸಲಾಗಿದೆ. ಭದ್ರತಾ ಪಡೆಗಳು ವಾಹನ ತಪಾಸಣೆಯನ್ನು ತೀವ್ರಗೊಳಿಸಿವೆ. ಈ ಎರಡೂ ಜಿಲ್ಲೆಗಳಲ್ಲಿ ಕಳೆದ ಎರಡು ವರ್ಷಗಳಿಂದ ಭಯೋತ್ಪಾದನಾ ಚಟುವಟಿಕೆಗಳು ಹೆಚ್ಚಿವೆ.
ಭಯೋತ್ಪಾದಕರ ದಾಳಿಯಲ್ಲಿ ವಾಯುಪಡೆಯ ಐವರು ಸಿಬ್ಬಂದಿ ಗಾಯಗೊಂಡಿದ್ದರು. ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿಕ್ಕಿ ಪಹಾಡೆ ಹುತಾತ್ಮರಾಗಿದ್ದಾರೆ. ಶನಿವಾರದಿಂದಲೂ ಶೋಧ ಕಾರ್ಯಾಚರಣೆ ನಡೆದಿದೆ.