ನವದೆಹಲಿ: ಭಾರತೀಯ ದಂಡ ಸಂಹಿತೆಯ ಸಮಗ್ರ ಬದಲಾವಣೆಗೆ ಅನುವು ಮಾಡುವ ಹೊಸ ಮೂರು ಕಾಯ್ದೆಗಳ ಸಿಂಧುತ್ವವನ್ನು ಪ್ರಶ್ನಿಸಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಸೋಮವಾರ ನಡೆಸಲಿದೆ.
ನವದೆಹಲಿ: ಭಾರತೀಯ ದಂಡ ಸಂಹಿತೆಯ ಸಮಗ್ರ ಬದಲಾವಣೆಗೆ ಅನುವು ಮಾಡುವ ಹೊಸ ಮೂರು ಕಾಯ್ದೆಗಳ ಸಿಂಧುತ್ವವನ್ನು ಪ್ರಶ್ನಿಸಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಸೋಮವಾರ ನಡೆಸಲಿದೆ.
ನೂತನ ಕಾಯ್ದೆಗಳಾದ ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಮತ್ತು ಭಾರತೀಯ ಸಾಕ್ಷ್ಯ ಸಂಹಿತೆಗಳಲ್ಲಿ ಹಲವು ದೋಷಗಳು, ಭಿನ್ನತೆಗಳಿವೆ ಎಂದು ಅರ್ಜಿದಾರರು ತಕರಾರು ತೆಗೆದಿದ್ದಾರೆ.
ಲೋಕಸಭೆಯು ಕಳೆದ ವರ್ಷ ಡಿಸೆಂಬರ್ 21ರಂದು ಈ ಮೂರು ಕಾಯ್ದೆಗಳಿಗೆ ಸಂಬಂಧಿಸಿದ ಮಸೂದೆಗಳನ್ನು ಅಂಗೀಕರಿಸಿತ್ತು. ಡಿಸೆಂಬರ್ 25ರಂದು ರಾಷ್ಟ್ರಪತಿಯವರು ಇವುಗಳಿಗೆ ಅಂಕಿತವನ್ನು ಹಾಕಿದ್ದರು.
ನ್ಯಾಯಮೂರ್ತಿಗಳಾದ ಬೇಲಾ ಎಂ.ತ್ರಿವೇದಿ ಮತ್ತು ಪಂಕಜ್ ಮಿತ್ತಲ್ ಅವರಿರುವ ರಜೆ ಅವಧಿಯ ಪೀಠವು ಈ ಅರ್ಜಿಯ ವಿಚಾರಣೆ ನಡೆಸುವ ಸಂಭವವಿದೆ.
ನೂತನ ಕಾಯ್ದೆಗಳ ಅನುಷ್ಠಾನಕ್ಕೆ ತಡೆ ನೀಡಬೇಕು ಎಂದು ಕೋರಿ ವಕೀಲ ವಿಶಾಲ್ ತಿವಾರಿ ಅವರು ಅರ್ಜಿ ಸಲ್ಲಿಸಿದ್ದಾರೆ. ವಿರೋಧಪಕ್ಷಗಳ ಅನೇಕ ಸದಸ್ಯರನ್ನು ಅಮಾನತುಪಡಿಸಿದ್ದ ಅವಧಿಯಲ್ಲಿ, ಯಾವುದೇ ಚರ್ಚೆಯೇ ಇಲ್ಲದೇ ಈ ಕಾಯ್ದೆಗಳ ಮಸೂದೆಗಳನ್ನು ಲೋಕಸಭೆಯಲ್ಲಿ ಅಂಗೀಕರಿಸಲಾಗಿತ್ತು ಎಂದು ಉಲ್ಲೇಖಿಸಿದ್ದಾರೆ.