: ಭಾರತದಲ್ಲಿ ಶೇಕಡಾ 20 ರಷ್ಟು ಕ್ಯಾನ್ಸರ್ ಪ್ರಕರಣಗಳು 40 ವರ್ಷದೊಳಗಿನವರಲ್ಲಿ ಕಂಡುಬರುತ್ತಿದೆ ಎಂದು ತಿಳಿದುಬಂದಿದೆ. ದೆಹಲಿ ಮೂಲದ ಕ್ಯಾನ್ಸರ್ ಮುಕ್ತ್ ಭಾರತ್ ಫೌಂಡೇಶನ್ ನಡೆಸಿದ ಅಧ್ಯಯನದಲ್ಲಿ ಈ ಬಗ್ಗೆ ವರದಿಯಾಗಿದೆ.
ಅಧ್ಯಯನದ ಪ್ರಕಾರ, 40 ವರ್ಷಕ್ಕಿಂತ ಕಡಮೆ ವಯಸ್ಸಿನ ಕ್ಯಾನ್ಸರ್ ರೋಗಿಗಳಲ್ಲಿ 60 ಪ್ರತಿಶತ ಪುರುಷರು ಮತ್ತು 40 ಪ್ರತಿಶತ ಮಹಿಳೆಯರಿದ್ದಾರೆ. ತಲೆ ಮತ್ತು ಕತ್ತಿನ ಕ್ಯಾನ್ಸರ್ ಹೆಚ್ಚು ವರದಿಯಾಗಿದೆ ಎಂದು ಅಧ್ಯಯನವು ಕಂಡುಹಿಡಿದಿದೆ. ಶೇಕಡ ಇಪ್ಪತ್ತಾರು ಮಂದಿಗೆ ಈ ಕ್ಯಾನ್ಸರ್ ಇದೆ. ಜಠರಗರುಳಿನ ಕ್ಯಾನ್ಸರ್ ಹದಿನಾರು ಪ್ರತಿಶತದೊಂದಿಗೆ ಎರಡನೇ ಸ್ಥಾನದಲ್ಲಿದೆ. ಇವುಗಳಲ್ಲಿ ಹೆಚ್ಚಿನವು ಕರುಳು, ಹೊಟ್ಟೆ ಮತ್ತು ಯಕೃತ್ತಿನ ಮೇಲೆ ಪರಿಣಾಮ ಬೀರುವ ಕ್ಯಾನ್ಸರ್ಗಳಾಗಿವೆ.
ಅಧ್ಯಯನದ ಪ್ರಕಾರ, ಸ್ತನ ಕ್ಯಾನ್ಸರ್ ರೋಗಿಗಳು ಶೇಕಡಾ 15 ಮತ್ತು ಲ್ಯುಕೇಮಿಯಾ ರೋಗಿಗಳು ಶೇಕಡಾ 9 ರಷ್ಟಿದ್ದಾರೆ. ಹಿರಿಯ ಆಂಕೊಲಾಜಿಸ್ಟ್ ಮತ್ತು ಕ್ಯಾನ್ಸರ್ ಮುಕ್ತ ಭಾರತ್ ಅಭಿಯಾನದ ಪ್ರಧಾನ ತನಿಖಾಧಿಕಾರಿ ಆಶಿಶ್ ಗುಪ್ತಾ ಮಾತನಾಡಿ, ಯುವಜನರಲ್ಲಿ ಹೆಚ್ಚಿನ ಕ್ಯಾನ್ಸರ್ ಪ್ರಮಾಣಗಳ ಹಿಂದೆ ಕಳಪೆ ಜೀವನಶೈಲಿ ಇದೆ ಎಂದಿದ್ದಾರೆ.
ಸ್ಥೂಲಕಾಯತೆ, ಆಹಾರ ಪದ್ಧತಿಯಲ್ಲಿನ ಬದಲಾವಣೆ, ಸಂಸ್ಕರಿಸಿದ ಆಹಾರಗಳ ಅತಿಯಾದ ಸೇವನೆ ಮತ್ತು ಜಡ ಜೀವನಶೈಲಿ ಕ್ಯಾನ್ಸರ್ ಪ್ರಮಾಣವನ್ನು ಹೆಚ್ಚಿಸುತ್ತಿದೆ. ಇದನ್ನು ಹೋಗಲಾಡಿಸಲು ಆರೋಗ್ಯಕರ ಜೀವನಶೈಲಿ ರೂಢಿಸಿಕೊಂಡು ತಂಬಾಕು, ಮದ್ಯಪಾನ ತ್ಯಜಿಸಬೇಕು ಎಂದರು.
ಅಧ್ಯಯನದ ಪ್ರಕಾರ, ಭಾರತದಲ್ಲಿ ಪತ್ತೆಯಾದ ಕ್ಯಾನ್ಸರ್ ಪ್ರಕರಣಗಳಲ್ಲಿ 27% ಹಂತ 1 ಮತ್ತು 2 ಮತ್ತು 63%, 3 ಮತ್ತು 4 ಹಂತಗಳಾಗಿವೆ. ಮೂರನೇ ಎರಡರಷ್ಟು ಕ್ಯಾನ್ಸರ್‍ಗಳು ತಡವಾಗಿ ಪತ್ತೆಯಾಗುತ್ತಿದ್ದು, ತಪಾಸಣೆಯ ವಿಳಂಬವೇ ಇದರ ಹಿಂದೆ ಇದೆ ಎಂದು ಹೇಳಿದರು.
ಮತ್ತೊಂದು ಇತ್ತೀಚಿನ ಅಧ್ಯಯನವು 2040 ರ ವೇಳೆಗೆ, ಸ್ತನ ಕ್ಯಾನ್ಸರ್ ಸಾವುಗಳು ವರ್ಷಕ್ಕೆ ಒಂದು ಮಿಲಿಯನ್ ತಲುಪುತ್ತದೆ ಮತ್ತು ಪ್ರಾಸ್ಟೇಟ್ ಕ್ಯಾನ್ಸರ್ ರೋಗಿಗಳು ದ್ವಿಗುಣಗೊಳ್ಳುವರು ಎನ್ನಲಾಗಿದೆ.
ವಿಶ್ವ ಆರೋಗ್ಯ ಸಂಸ್ಥೆ ನಡೆಸಿದ ಇತ್ತೀಚಿನ ಸಂಶೋಧನೆಯ ಪ್ರಕಾರ ಕ್ಯಾನ್ಸರ್ ರೋಗಿಗಳ ಪ್ರಮಾಣವು ಮುಂಬರುವ ವರ್ಷಗಳಲ್ಲಿ ಭಾರಿ ಏರಿಕೆಯನ್ನು ದಾಖಲಿಸುತ್ತದೆ ಎಂದು ಕಂಡುಹಿಡಿದಿದೆ. 2050 ರ ವೇಳೆಗೆ ಇದು 77% ಕ್ಯಾನ್ಸರ್ ಪ್ರಕರಣಗಳನ್ನು ತಲುಪುತ್ತದೆ ಎಂದು ಸಂಶೋಧನೆಯು ಕಂಡುಹಿಡಿದಿದೆ. ಜೀವನಶೈಲಿ ಮತ್ತು ಪರಿಸರದ ಅಂಶಗಳು ಕ್ಯಾನ್ಸರ್ ಪ್ರಮಾಣವನ್ನು ಹೆಚ್ಚಿಸುವಲ್ಲಿ ಪಾತ್ರವಹಿಸುತ್ತವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳುತ್ತದೆ. ಏಷ್ಯಾದಲ್ಲಿ ತಂಬಾಕು ಸೇವನೆ ಮತ್ತು ಶ್ವಾಸಕೋಶದ ಕ್ಯಾನ್ಸರ್ ನಡುವೆ ಪರಸ್ಪರ ಸಂಬಂಧವಿದೆ ಮತ್ತು ಧೂಮಪಾನ, ಮದ್ಯಪಾನ ಮತ್ತು ಸ್ಥೂಲಕಾಯತೆಯು ಕ್ಯಾನ್ಸರ್ ಪ್ರಮಾಣವನ್ನು ಹೆಚ್ಚಿಸುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.