ರಾಜ್‌ಕೋಟ್: ಗುಜರಾತ್ನ ರಾಜ್‌ಕೋಟ್‌ನಲ್ಲಿ ಭಾರಿ ಜನಸಂದಣಿ ಇದ್ದ 'ಟಿಆರ್‌ಪಿ ಗೇಮ್ ಝೋನ್'ನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಮಕ್ಕಳು ಸೇರಿ ಕನಿಷ್ಠ 20 ಮಂದಿ ಸಾವಿಗೀಡಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಬಗ್ಗೆ ಎಎನ್‌ಐ ಸುದ್ದಿ ಸಂಸ್ಥೆ ಎಕ್ಸ್‌ನಲ್ಲಿ ಮಾಹಿತಿ ನೀಡಿದೆ.
ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಜಾರಿಯಲ್ಲಿದ್ದು, 20 ಮೃತದೇಹಳಗನ್ನು ಹೊರತೆಗೆಯಲಾಗಿದೆ. ದೇಹಗಳನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿದೆ. ಸದ್ಯ ಬೆಂಕಿ ನಿಯಂತ್ರಣದಲ್ಲಿದೆ ಎಂದು ರಾಜ್‌ಕೋಟ್ ಪೊಲೀಸ್ ಆಯುಕ್ತ ರಾಜು ಭಾರ್ಗವ ಎಎನ್‌ಐಗೆ ತಿಳಿಸಿದ್ದಾರೆ.
ಬೇಸಿಗೆ ರಜೆ ಹಾಗೂ ವಾರಾಂತ್ಯ ಇದ್ದಿದ್ದರಿಂದ ಸ್ಥಳದಲ್ಲಿ ಹೆಚ್ಚಿನ ಜನಸಂದಣಿ ಇತ್ತು. ಹೀಗಾಗಿ ಹೆಚ್ಚಿನ ಸಾವು ನೋವು ಸಂಭವಿಸುವ ಸಾಧ್ಯತೆ ಇದೆ.
'ಸ್ಥಳದಲ್ಲಿ ತುರ್ತು ಕಾರ್ಯಾಚರಣೆ ಕೈಗೊಳ್ಳಲು ನಗರಾಡಳಿತಕ್ಕೆ ಸೂಚಿಸಲಾಗಿದೆ' ಎಂದು ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಎಕ್ಸ್‌ನಲ್ಲಿ ಮಾಹಿತಿ ನೀಡಿದ್ದಾರೆ.
'ಬೆಂಕಿ ಅನಾಹುತ ಸಂಭವಿಸಿರುವುದರ ಬಗ್ಗೆ ಸಂಜೆ 4.30ಕ್ಕೆ ನಿಯಂತ್ರಣ ಕೊಠಡಿಗೆ ಮಾಹಿತಿ ಬಂತು. ಸ್ಥಳಕ್ಕೆ ಅಗ್ನಿಶಾಮಕ ಹಾಗೂ ಆಯಂಬುಲೆನ್ಸ್‌ಗಳು ದೌಡಾಯಿಸಿದವು. ಬೆಂಕಿಯಿಂದಾಗಿ ಕಟ್ಟಡ ಕುಸಿದಿತ್ತು, ಅವಶೇಷಗಳನ್ನು ತೆರವುಗೊಳಿಸಲಾಗುತ್ತಿದೆ' ಎಂದು ರಾಜ್‌ಕೋಟ್ ಜಿಲ್ಲಾಧಿಕಾರಿ ಪ್ರಭಾವ್ ಜೋಶಿ ತಿಳಿಸಿದ್ದಾರೆ.
'ದುರಂತಕ್ಕೆ ಕಾರಣ ಏನೆನ್ನುವುದನ್ನು ಪತ್ತೆ ಮಾಡಲಾಗುವುದು. ನಗರದಲ್ಲಿರುವ ಎಲ್ಲಾ ಗೇಮ್ ಝೋನ್‌ಗಳನ್ನು ಬಂದ್ ಮಾಡಲು ಆದೇಶಿಸಲಾಗಿದೆ' ಎಂದು ಪೊಲೀಸ್ ಆಯುಕ್ತ ಭಾರ್ಗವ್ ತಿಳಿಸಿದ್ದಾರೆ.