ಮುಂಬೈ: ಮುಂಬೈನಲ್ಲಿ ನೆಲೆಸಿರುವ ಬಹುರಾಷ್ಟ್ರೀಯ ಕಂಪನಿಯ (ಎಮ್‌ಎನ್‌ಸಿ) ನಿವೃತ್ತ ನಿರ್ದೇಶಕಿರೊಬ್ಬರು ಸೈಬರ್ ವಂಚಕರಿಂದ ₹25 ಕೋಟಿ ಕಳೆದುಕೊಂಡಿದ್ದಾರೆ.
ತಾವು ಸಿಬಿಐ (ಕೇಂದ್ರೀಯ ತನಿಖಾ ದಳ) ಅಧಿಕಾರಿಗಳು ಎಂದು ಪರಿಚಯಿಸಿಕೊಂಡ ಸೈಬರ್ ವಂಚಕರು ತನಿಖೆ ನಡೆಸುತ್ತಿರುವುದಾಗಿ ಹೇಳಿಕೊಂಡು ವಂಚನೆ ಎಸಗಿದ್ದಾರೆ ಎಂದು ಗುರುವಾರ ಅಧಿಕಾರಿಗಳು ತಿಳಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ವ್ಯಕ್ತಿಯೊಬ್ಬರನ್ನು ಗುರಿಯಾಗಿಸಿಕೊಂಡು ನಡೆದಿರುವ ಅತಿ ದೊಡ್ಡ ಸೈಬರ್ ವಂಚನೆ ಪ್ರಕರಣಗಳಲ್ಲಿ ಇದೂ ಒಂದಾಗಿದೆ. ವಂಚಕರಿಗೆ ಹಣ ನೀಡಲು ಸಂತ್ರಸ್ತ ನಿವೃತ್ತ ನಿರ್ದೇಶಕಿಯು, ತಮ್ಮ ಹಾಗೂ ತಮ್ಮ ತಾಯಿಯ ಮ್ಯೂಚುವಲ್ ಫಂಡ್‌ನ ಹೂಡಿಕೆಯ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಅಲ್ಲದೇ ಚಿನ್ನದ ಮೇಲೆ ಸಾಲ ಕೂಡ ಮಾಡಿ ಹಣ ನೀಡಿದ್ದಾರೆ. ಫೆ.6ರಿಂದ ಈವರೆಗೆ ಒಟ್ಟು 2 ತಿಂಗಳ ಅವಧಿಯಲ್ಲಿ ಈ ವಂಚನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಂಚನೆ ನಡೆದಿದ್ದು ಹೇಗೆ?: ಟೆಲಿಕಾಂ ಅಧಿಕಾರಿಯಂತೆ ನಟಿಸಿ ವ್ಯಕ್ತಿಯೊಬ್ಬ ಸಂತ್ರಸ್ತೆಗೆ ವಾಟ್ಸ್‌ಆಯಪ್ ಕರೆ ಮಾಡಿ, ತಮ್ಮ ಮೂರು ಮೊಬೈಲ್ ಸಂಖ್ಯೆಗಳನ್ನು ನಿಷ್ಕ್ರಿಯಗೊಳಿಸಲಾಗುತ್ತದೆ ಎಂದು ಹೇಳಿದ್ದಾನೆ. ಬಳಿಕ ಇದಕ್ಕೆ ಕಾರಣ ತಿಳಿಯಲು ತಾನು ಪೊಲೀಸ್ ಅಧಿಕಾರಿಯೊಬ್ಬರಿಗೆ ಕರೆ ವರ್ಗಾಯಿಸುತ್ತೇನೆಂದು ಹೇಳಿದ್ದಾನೆ. ಪೊಲೀಸ್ ಅಧಿಕಾರಿಯ ಸೋಗಿನಲ್ಲಿ ಮಾತನಾಡಿದ ವ್ಯಕ್ತಿಯು, 'ನಿಮ್ಮ ವಿರುದ್ಧ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ದೂರು ಸ್ವೀಕರಿಸಲಾಗಿದೆ.
ನಿಮ್ಮ ಮೊಬೈಲ್ ಸಂಖ್ಯೆ ಹಾಗೂ ಆಧಾರ್ ಕಾರ್ಡ್ ಸಂಖ್ಯೆಯನ್ನು ಪ್ರಕರಣದಲ್ಲಿ ಲಿಂಕ್ ಮಾಡಲಾಗಿದೆ' ಎಂದು ತಿಳಿಸಿದ್ದಾನೆ. ಬಳಿಕ ಆತ ಇನ್ನೊಬ್ಬ ವ್ಯಕ್ತಿಗೆ ಕರೆಯನ್ನು ವರ್ಗಾಯಿಸಿದ್ದಾನೆ. ತಾನು ಸಿಬಿಐ ಅಧಿಕಾರಿ ಎಂಬ ಸೋಗಿನಲ್ಲಿ ಆ ವ್ಯಕ್ತಿ ಮಾತನಾಡಿ, ಹಣ ಅಕ್ರಮ ವರ್ಗಾವಣೆ ಪ್ರಕರಣದ ಬೆದರಿಕೆ ಹಾಕಿದ್ದಾನೆ. ಪ್ರಕರಣದಿಂದ ಹೊರಬರಬೇಕಾದರೆ ತಾನು ನೀಡುವ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡಬೇಕು ಎಂದು ಸೂಚಿಸಿದ್ದಾನೆ.
ವಂಚಕರು ಸಂತ್ರಸ್ತೆ ಹೆಸರಿನಲ್ಲಿ ಚಾಲ್ತಿ ಖಾತೆ ತೆರೆದು, ಅದಕ್ಕೆ ಹಣ ಜಮೆ ಮಾಡುವಂತೆ ಹೇಳಿ, ಆ ಹಣ ಭಾರತೀಯ ರಿಸರ್ವ್ ಬ್ಯಾಂಕ್‌ಗೆ ತಲುಪುತ್ತದೆ ಎಂದು ನಂಬಿಸಿದ್ದಾರೆ. ಅಲ್ಲದೇ ರಶೀದಿಗಾಗಿ ಸ್ಥಳೀಯ ಪೊಲೀಸ್ ಠಾಣೆಯನ್ನು ಸಂಪರ್ಕಿಸಲು ಹೇಳಿದ್ದಾರೆ. ಇಷ್ಟಾದ ನಂತರ ಸಂತ್ರಸ್ತೆಗೆ ತಾವು ಮೋಸ ಹೋಗಿರುವುದು ತಿಳಿದು, ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು, ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ಒಟ್ಟು 31 ಬ್ಯಾಂಕ್ ಖಾತೆಗಳನ್ನು ಸ್ಥಗಿತ
ಗೊಳಿಸಿದ್ದಾರೆ.