ವಾಷಿಂಗ್ಟನ್: 26 ವರ್ಷದ ಭಾರತ ಮೂಲದ ವಿದ್ಯಾರ್ಥಿಯೊಬ್ಬ ಮೇ .2ರಿಂದ ಅಮೆರಿಕದ ಷಿಕಾಗೊ ನಗರದಿಂದ ಕಾಣೆಯಾಗಿದ್ದಾನೆ.
ರೂಪೇಶ್ ಚಂದ್ರ ಚಿಂತಕಿಂಡಿ ಎಂಬ ವಿದ್ಯಾರ್ಥಿ ಎನ್ ಶೆರಿಡಾನ್ ರಸ್ತೆಯ 4300 ಬ್ಲಾಕ್‌ನಿಂದ ನಾಪತ್ತೆಯಾಗಿದ್ದಾನೆ ಎಂದು ಷಿಕಾಗೊ ಪೊಲೀಸರು ತಿಳಿಸಿದ್ದಾರೆ.
ಭಾರತೀಯ ವಿದ್ಯಾರ್ಥಿಗಳ ನಾಪತ್ತೆ ಪ್ರಕರಣಗಳು ಅಮೆರಿಕದಲ್ಲಿ ಹೆಚ್ಚುತ್ತಿದ್ದು, ಈ ಬಗ್ಗೆ ಅಲ್ಲಿನ ಭಾರತೀಯ ಸಮುದಾಯ ಕಳವಳ ವ್ಯಕ್ತಪಡಿಸಿದೆ.
ವಿದ್ಯಾರ್ಥಿಯನ್ನು ಪತ್ತೆ ಮಾಡುವ ದೃಷ್ಟಿಯಿಂದ ಸ್ಥಳೀಯ ಪೊಲೀಸರು ಮತ್ತು ಭಾರತೀಯ ಸಮುದಾಯದ ಜೊತೆ ಸಂಪರ್ಕದಲ್ಲಿದ್ದೇವೆ. ಭಾರತೀಯ ವಿದ್ಯಾರ್ಥಿ ರೂಪೇಶ್ ಚಂದ್ರ ಚಿಂತಕಿಂಡಿ ಮೇ 2ರಿಂದ ನಾಪತ್ತೆಯಾಗಿರುವ ಬಗ್ಗೆ ಭಾರತೀಯ ಕಾನ್ಸುಲೆಟ್ ಬಹಳ ಕಳವಳ ವ್ಯಕ್ತಪಡಿಸುತ್ತಿದೆ ಎಂದು ಚಿಕಾಗೊದಲ್ಲಿರುವ ಭಾರತದ ಕಾನ್ಸುಲೇಟ್ ಜನರಲ್ ಹೇಳಿದ್ದಾರೆ.
ರೂಪೇಶ್ ಬಗ್ಗೆ ಯಾವುದೇ ಮಾಹಿತಿಯನ್ನು ಹಂಚಿಕೊಳ್ಳುವಂತೆ ಸಾರ್ವಜನಿಕರಲ್ಲಿ ಮೇ 6ರಂದು ಷಿಕಾಗೊ ಪೊಲೀಸರು ಮನವಿ ಮಾಡಿದ್ದರು.
ಅಮೆರಿಕದಲ್ಲಿ ಭಾರತೀಯ ವಿದ್ಯಾರ್ಥಿಗಳ ಭದ್ರತೆ ಕುರಿತಂತೆ ಇತ್ತೀಚೆಗೆ ಸರ್ಕಾರವು ಅಮೆರಿಕದ ಗಮನ ಸೆಳೆದಿತ್ತು. ಭಾರತೀಯ ವಿದ್ಯಾರ್ಥಿಗಳ ರಕ್ಷಣೆಗೆ ಎಲ್ಲ ಪ್ರಯತ್ನ ಮಾಡುವುದಾಗಿ ಅಮೆರಿಕ ಭರವಸೆ ನೀಡಿತ್ತು.
ಅಮೆರಿಕದ ಕ್ಲೇವ್‌ಲ್ಯಾಂಡ್‌ನಲ್ಲಿ ಮಾರ್ಚ್ ತಿಂಗಳಿನಿಂದ ನಾಪತ್ತೆಯಾಗಿದ್ದ ಭಾರತೀಯ ವಿದ್ಯಾರ್ಥಿ ಶವ ಏಪ್ರಿಲ್ 25ರಂದು ಪತ್ತೆಯಾಗಿತ್ತು.
ಮಾರ್ಚ್‌ನಲ್ಲಿ 34 ವರ್ಷದ ನೃತ್ಯ ಕಲಾವಿದ ಅಮರನಾಥ್ ಘೋಷ್ ಅವರನ್ನು ಸೇಂಟ್ ಲೂಯಿಸ್‌ನಲ್ಲಿ ಗುಂಡಿಕ್ಕಿ ಕೊಲ್ಲಲಾಗಿತ್ತು.