ನವದೆಹಲಿ :ಸೈಬರ್ ಕ್ರೈಮ್ ಗಳಲ್ಲಿ ಬಳಕೆಯಾಗುತ್ತಿರುವ 28,000 ಮೊಬೈಲ್ ಹ್ಯಾಂಡ್ ಸೆಟ್ ಗಳನ್ನು ನಿರ್ಬಂಧಿಸಲು ದೂರವಾಣಿ ನಿರ್ವಾಹಕ ಕಂಪನಿಗಳಿಗೆ ಶುಕ್ರವಾರ ಆದೇಶಿಸಿರುವ ಕೇಂದ್ರ ಸರಕಾರವು, ಈ ಹ್ಯಾಂಡ್ ಸೆಟ್ ಗಳೊಂದಿಗೆ ಸಂಬಂಧ ಹೊಂದಿರುವ 20 ಲಕ್ಷ ಮೊಬೈಲ್ ಸಂಪರ್ಕಗಳನ್ನು ಮರು ಪರಿಶೀಲಿಸುವಂತೆ ನಿರ್ದೇಶಿಸಿದೆ.
ದೂರ ಸಂಪರ್ಕಗಳ ಸಚಿವಾಲಯವು ಶುಕ್ರವಾರ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ, ಸೈಬರ್ ಕ್ರೈಮ್ ಗಳು ಹಾಗೂ ಆರ್ಥಿಕ ವಂಚನೆಗಳಲ್ಲಿ ದೂರಸಂಪರ್ಕ ಸಂಪನ್ಮೂಲಗಳನ್ನು ದುರ್ಬಳಕೆ ಮಾಡುವುದನ್ನು ತಡೆಯಲು ದೂರ ಸಂಪರ್ಕ ಇಲಾಖೆ, ಗೃಹ ವ್ಯವಹಾರಗಳ ಸಚಿವಾಲಯ ಹಾಗೂ ರಾಜ್ಯ ಪೊಲೀಸರು ಜೊತೆಯಾಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಹೇಳಿದೆ.
ಈ ಸಹಭಾಗಿತ್ವ ಪ್ರಯತ್ನವು ವಂಚಕರ ಜಾಲವನ್ನು ಬಗ್ಗುಬಡಿಯುವ ಹಾಗೂ ನಾಗರಿಕರನ್ನು ಡಿಜಿಟಲ್ ಅಪಾಯಗಳಿಂದ ರಕ್ಷಿಸುವ ಗುರಿ ಹೊಂದಿದೆ.
ಗೃಹ ವ್ಯವಹಾರಗಳ ಸಚಿವಾಲಯ ಹಾಗೂ ರಾಜ್ಯ ಪೊಲೀಸರು ನಡೆಸಿರುವ ವಿಶ್ಲೇಷಣೆಯ ಪ್ರಕಾರ, ಸೈಬರ್ ಕ್ರೈಮ್ ಗಳಲ್ಲಿ 28,000 ಮೊಬೈಲ್ ಹ್ಯಾಂಡ್ ಸೆಟ್ ಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ. ಇದರೊಂದಿಗೆ 20 ಲಕ್ಷದಷ್ಟು ಬೃಹತ್ ಪ್ರಮಾಣದ ಮೊಬೈಲ್ ಸಂಖ್ಯೆಗಳನ್ನು ಈ ಮೊಬೈಲ್ ಹ್ಯಾಂಡ್ ಸೆಟ್ ಗಳೊಂದಿಗೆ ಬಳಕೆ ಮಾಡಲಾಗಿದೆ ಎಂದೂ ದೂರಸಂಪರ್ಕ ಇಲಾಖೆಯು ವಿಶ್ಲೇಷಿಸಿ, ಪತ್ತೆ ಹಚ್ಚಿದೆ.
ಇದರ ಬೆನ್ನಿಗೇ, ದೇಶಾದ್ಯಂತ 28,200 ಮೊಬೈಲ್ ಹ್ಯಾಂಡ್ ಸೆಟ್ ಗಳನ್ನು ನಿರ್ಬಂಧಿಸಬೇಕು ಹಾಗೂ ಈ ಮೊಬೈಲ್ ಹ್ಯಾಂಡ್ ಸೆಟ್ ಗಳೊಂದಿಗೆ ಸಂಬಂಧ ಹೊಂದಿರುವ 20 ಲಕ್ಷ ಮೊಬೈಲ್ ಸಂಪರ್ಕಗಳನ್ನು ತಕ್ಷಣವೇ ಮರು ಪರಿಶೀಲನೆಗೆ ಒಳಪಡಿಸಬೇಕು ಎಂದು ದೂರಸಂಪರ್ಕ ಸೇವಾ ಸಂಸ್ಥೆಗಳಿಗೆ ದೂರಸಂಪರ್ಕ ಇಲಾಖೆಯು ನಿರ್ದೇಶನ ನೀಡಿದೆ. ಮರು ಪರಿಶೀಲನೆಯು ವಿಫಲಗೊಂಡ ನಂತರ, ಅಂತಹ ಸಂಪರ್ಕಗಳನ್ನು ಕಡಿತಗೊಳಿಸುವಂತೆಯೂ ದೂರಸಂಪರ್ಕ ಕಂಪನಿಗಳಿಗೆ ದೂರಸಂಪರ್ಕಗಳ ಇಲಾಖೆಯು ಸೂಚಿಸಿದೆ.
ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ದೂರಸಂಪರ್ಕಗಳ ಸಚಿವಾಲಯವು, "ಏಕೀಕೃತ ಧೋರಣೆಯು ಸಾರ್ವಜನಿಕ ಸುರಕ್ಷತೆ, ಸಮಗ್ರ ದೂರಸಂಪರ್ಕ ಮೂಲಸೌಕರ್ಯಗಳ ರಕ್ಷಣೆ ಹಾಗೂ ಸುರಕ್ಷಿತ ಡಿಜಿಟಲ್ ಪರಿಸರವನ್ನು ಖಾತರಿ ಪಡಿಸುವ ಸಹಭಾಗಿತ್ವ ಬದ್ಧತೆಯನ್ನು ಪ್ರದರ್ಶಿಸುತ್ತದೆ" ಎಂದು ಹೇಳಿದೆ.
ಸೈಬರ್ ಕ್ರೈಮ್ ಪ್ರಕರಣದಲ್ಲಿ ದೂರಸಂಪರ್ಕಗಳ ಇಲಾಖೆಯು ಇಂತಹ ಕ್ರಮಗಳನ್ನು ತೆಗೆದುಕೊಂಡಿದೆ. ಮಂಗಳವಾರ ಆರ್ಥಿಕ ಹಗರಣದಲ್ಲಿ ಬಳಸಲಾಗಿದ್ದ ದೂರವಾಣಿ ಸಂಖ್ಯೆಯೊಂದನ್ನು ದೂರಸಂಪರ್ಕ ಇಲಾಖೆಯು ಕಡಿತಗೊಳಿಸಿದ್ದು, ಈ ಸಂಖ್ಯೆಯೊಂದಿಗೆ ಸಂಬಂಧ ಹೊಂದಿದ್ದ 20 ಮೊಬೈಲ್ ಹ್ಯಾಂಡ್ ಸೆಟ್ ಗಳನ್ನೂ ನಿರ್ಬಂಧಿಸಿದೆ ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.