ಬೇಸಿಗೆಯಲ್ಲಿ ಭೂಮಿಯನ್ನು ಸುಡುತ್ತಿರುವ ಸೂರ್ಯನಿಂದ 2 ಪ್ರಬಲ ಜ್ವಾಲೆಗಳು ಬಿಡುಗಡೆಯಾಗಿದೆ.
11 ವರ್ಷಕ್ಕೊಮ್ಮೆ ಸಂಭವಿಸುವ ಸೂರ್ಯನ ಆಯಸ್ಕಾಂತೀಯ ಕ್ಷೇತ್ರದ ಆವರ್ತ ಇದಾಗಿದ್ದು, ಈ ಹಂತದಲ್ಲಿ ಸೂರ್ಯನ ಉತ್ತರ ಮತ್ತು ದಕ್ಷಿಣ ಧ್ರುವಗಳು ಸ್ಥಳ ಬದಲಾಗುತ್ತವೆ. ಉತ್ತರ ಮತ್ತು ದಕ್ಷಿಣ ಧ್ರುವಗಳು ಬದಲಾಗುವುದಕ್ಕೂ ಮುಂಚೆ ಇದ್ದ ಸ್ಥಿತಿಗೆ ಮರಳಲು ಮತ್ತೆ 11 ವರ್ಷಗಳ ಅವಧಿ ತೆಗೆದುಕೊಳ್ಳುತ್ತದೆ.
ಪ್ರಸಕ್ತ ಸೌರ ಚಕ್ರದಲ್ಲಿ ಸೂರ್ಯನ ಚಟುವಟಿಕೆಯು ಗರಿಷ್ಠ ಪ್ರಮಾಣದಲ್ಲಿದೆ. ಈ ವೇಳೆ ಸೂರ್ಯನಿಂದ ಹಲವು ಪ್ರಖರ ಜ್ವಾಲೆಗಳು ಬಿಡುಗಡೆಗೊಂಡು ಭೂಮಿಯ ಮೇಲೆಯೂ ಇದು ಪರಿಣಾಮ ಉಂಟುಮಾಡುತ್ತದೆ.
ಸನ್ ಸ್ಪಾಟ್ ಪ್ರದೇಶ AR3663 ರಲ್ಲಿ ಕೆಲವೇ ದಿನಗಳ ಹಿಂದೆ 2 ಬೃಹತ್ ಸೌರ ಜ್ವಾಲೆಗಳು ಬಿಡುಗಡೆಯಾಗಿದ್ದು, ಭೂಮಿಗೆ ಮುಖಮಾಡಿವೆ.
ಮೇ.02 ರಂದು ಬಿಡುಗಡೆಯಾಗಿರುವ ಬೃಹತ್ ಸೌರ ಜ್ವಾಲೆ, ಸೌರ ಜ್ವಾಲೆಗಳ ಪೈಕಿಯೇ ಅತ್ಯಂತ ಪ್ರಬಲವಾದ ಎಕ್ಸ್- ಶ್ರೇಣಿಯ ಜ್ವಾಲೆಗಳಾಗಿವೆ ಎಂದು ಸ್ಪೇಸ್.ಕಾಮ್ ಹೇಳಿದೆ. ಈ ರೀತಿಯ ಜ್ವಾಲೆಗಳ ಪರಿಣಾಮವಾಗಿ ಆಸ್ಟ್ರೇಲಿಯಾ, ಜಪಾನ್, ಚೀನಾದ ಬಹುತೇಕ ಪ್ರದೇಶಗಳಲ್ಲಿ ರೇಡಿಯೋ ಬ್ಲ್ಯಾಕೌಟ್ (ರೇಡಿಯೊ ಸಂವಹನಗಳಲ್ಲಿ ದೀರ್ಘಾವಧಿಯ ಅಡಚಣೆ) ನ್ನುಂಟುಮಾಡಿದೆ.
"X ಜ್ವಾಲೆ! ಸನ್‌ಸ್ಪಾಟ್ ಪ್ರದೇಶ AR3663 X1.7 ಜ್ವಾಲೆಯನ್ನು ಉತ್ಪಾದಿಸಿತು, ಇದು ಈ ಚಕ್ರದಲ್ಲಿ ಇದುವರೆಗಿನ 11 ನೇ ಅತಿದೊಡ್ಡ ಜ್ವಾಲೆಯಾಗಿದೆ. ಇದು ಒಟ್ಟು 25 ನಿಮಿಷಗಳ ಕಾಲ ಇದ್ದು 02:22 U.T ವರೆಗೆ ಉತ್ತುಂಗಕ್ಕೇರಿತು ಎಂದು ಸೌರ ಭೌತಶಾಸ್ತ್ರಜ್ಞ ಕೀತ್ ಸ್ಟ್ರಾಂಗ್ ಬರೆದಿದ್ದಾರೆ. ಟ್ವಿಟರ್ ನಲ್ಲಿ ಬರೆದಿದ್ದಾರೆ.
ಎರಡನೇ ಜ್ವಾಲೆ ಮೇ.03 ರಂದು ಬಿಡುಗಡೆ ಮಾಡಿದ್ದು, ಎಂ-ಶ್ರೇಣಿಯ ಜ್ವಾಲೆ ಇದಾಗಿದೆ ಎಂದು ಸ್ಪೇಸ್.ಕಾಮ್ ತಿಳಿಸಿದೆ.
ಹೊಸದಾಗಿ ಹೊರಹೊಮ್ಮಿದ ಸನ್‌ಸ್ಪಾಟ್ ಸೂರ್ಯನ ಮೇಲ್ಮೈಯಲ್ಲಿ ಹಲವಾರು ಜ್ವಾಲೆಗಳು ಹೊರಹೊಮ್ಮುವುದಕ್ಕೆ ಸಾಕ್ಷಿಯಾಗಿದೆ. ಇತ್ತೀಚಿಗೆ ಬಿಡುಗಡೆಯಾದ ಜ್ವಾಲೆಗಳು ಭೂಮಿಯತ್ತ ಮುಖ ಮಾಡಿದ್ದವು ಹಾಗೂ ಈ ಸೌರ ಜ್ವಾಲೆಗಳ ಪೈಕಿ ಒಂದರಲ್ಲಾದರೂ ಕರೋನಲ್ ಮಾಸ್ ಎಜೆಕ್ಷನ್ (CME) ಜೊತೆಯಾಗಿದ್ದಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ. ಪ್ಲಾಸ್ಮಾ ಮತ್ತು ಕಾಂತೀಯ ಕ್ಷೇತ್ರದ ಬೃಹತ್ ಪ್ರಮಾಣದ ಬಿಡುಗಡೆಯನ್ನು ಸಿಎಂಇ ಎಂದು ಹೇಳುತ್ತಾರೆ.
Space.com ಪ್ರಕಾರ, ಭೂಮಿಯತ್ತ ಧಾವಿಸಿರುವ CME ಪವರ್ ಗ್ರಿಡ್‌ಗಳು, ದೂರಸಂಪರ್ಕ ಜಾಲಗಳು ಮತ್ತು ಕಕ್ಷೆಯಲ್ಲಿರುವ ಉಪಗ್ರಹಗಳ ವಿನಾಶವನ್ನುಂಟುಮಾಡುತ್ತದೆ, ಜೊತೆಗೆ ಗಗನಯಾತ್ರಿಗಳನ್ನು ಅಪಾಯಕಾರಿ ಪ್ರಮಾಣದ ವಿಕಿರಣಕ್ಕೆ ಒಡ್ಡುತ್ತದೆ.
ನಾಸಾದ ಪ್ರಕಾರ, ಸೂರ್ಯನ ಮತ್ತು ಅದರ ಸುತ್ತಲಿನ ಶಕ್ತಿಯುತ ಕಾಂತೀಯ ಕ್ಷೇತ್ರಗಳು ಮರುಸಂಪರ್ಕಿಸಿದಾಗ ಸೌರ ಜ್ವಾಲೆಗಳು ಸಂಭವಿಸುತ್ತವೆ. ಸೌರ ವಾತಾವರಣದಲ್ಲಿ ಕಾಂತೀಯ ಶಕ್ತಿಯು ಸಂಗ್ರಹವಾದಾಗ ಮತ್ತು ಬಿಡುಗಡೆಯಾದಾಗ ಈ ಜ್ವಾಲೆಗಳು ಸೃಷ್ಟಿಯಾಗುತ್ತವೆ.
ಅವುಗಳ ಶಕ್ತಿಗೆ ಅನುಗುಣವಾಗಿ ಈ ಜ್ವಾಲೆಗಳನ್ನು ವಿಭಾಗಿಸಲಾಗಿದ್ದು, ಈ ಪೈಕಿ X-class ಜ್ವಾಲೆಗಳು ಪ್ರಬಲವಾಗಿದ್ದರೆ, ಎಂ-class ಜ್ವಾಲೆಗಳು Xಗಿಂತಲೂ 10 ಪಟ್ಟು ಕಡಿಮೆ ತೀವ್ರತೆ ಹೊಂದಿರುತ್ತವೆ ಈ ನಂತರದ ಸ್ಥಾನಗಳಲ್ಲಿ ಸಿ-ಕ್ಲಾಸ್, ಬಿ ಕ್ಲಾಸ್ ಜ್ವಾಲೆಗಳಿವೆ.