ಹೈದರಾಬಾದ್: ಮುತ್ತಿನ ನಗರಿ ಹೈದರಾಬಾದ್ ಜೂನ್ 2ರ ನಂತರ, ತೆಲಂಗಾಣ ಹಾಗೂ ಆಂಧ್ರಪ್ರದೇಶದ ಜಂಟಿ ರಾಜಧಾನಿಯಾಗಿ ಮುಂದುವರಿಯುವುದಿಲ್ಲ. ಆನಂತರ, ಅದು ತೆಲಂಗಾಣದ ರಾಜಧಾನಿಯಾಗಿ ಮಾತ್ರ ಇರಲಿದೆ.
'ಹೈದರಾಬಾದ್ ನಗರವು, 10 ವರ್ಷ ಮೀರದಂತೆ ತೆಲಂಗಾಣ ಹಾಗೂ ಆಂಧ್ರಪ್ರದೇಶ ರಾಜ್ಯಗಳ ರಾಜಧಾನಿಯಾಗಿರಲಿದೆ.
10 ವರ್ಷಗಳ ನಂತರ, ಹೈದರಾಬಾದ್ ನಗರವು ತೆಲಂಗಾಣದ ರಾಜಧಾನಿಯಾಗಿರಲಿದೆ' ಎಂದು ಇದೇ ಸೆಕ್ಷನ್ 5ರಲ್ಲಿ ಉಲ್ಲೇಖಿಸಲಾಗಿದೆ.
ಹೈದರಾಬಾದ್‌ನಲ್ಲಿರುವ ಲೇಕ್ ವ್ಯೂ ಗೆಸ್ಟ್ ಹೌಸ್ ಸೇರಿದಂತೆ ಪ್ರಮುಖ ಕಟ್ಟಡಗಳನ್ನು ಸುಪರ್ದಿಗೆ ಪಡೆಯುವಂತೆ ಮುಖ್ಯಮಂತ್ರಿ ಎ.ರೇವಂತ ರೆಡ್ಡಿ ಅವರು ಇತ್ತೀಚೆಗೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು. ನಗರದ ಪ್ರಮುಖ ಕಟ್ಟಡಗಳನ್ನು ಆಗ ನೂತನವಾಗಿ ಅಸ್ತಿತ್ವಕ್ಕೆ ಬಂದಿದ್ದ ಆಂಧ್ರಪ್ರದೇಶ ರಾಜ್ಯದ ಕಚೇರಿಗಳಿಗಾಗಿ 10 ವರ್ಷಗಳ ಅವಧಿಗೆ ಹಂಚಿಕೆ ಮಾಡಲಾಗಿತ್ತು.
ಆಂಧ್ರಪ್ರದೇಶ ಪುನರ್‌ರಚನೆ ಕಾಯ್ದೆಯಡಿ, ಉಭಯ ರಾಜ್ಯಗಳ ನಡುವೆ ಬಗೆಹರಿಯದೇ ಉಳಿದಿರುವ ವಿಷಯಗಳ ಕುರಿತು ಸಮಗ್ರ ವರದಿ ಸಲ್ಲಿಸುವಂತೆಯೂ ಮುಖ್ಯಮಂತ್ರಿ ರೇವಂತ ರೆಡ್ಡಿ ಸೂಚನೆ ನೀಡಿದ್ದರು.
'ಜೂನ್ 2ರ ಒಳಗಾಗಿ, ಉಭಯ ರಾಜ್ಯಗಳ ನಡುವಿನ ಸಮಸ್ಯೆಗಳನ್ನು ಬಗೆಹರಿಸಲು ಹಾಗೂ ಕಟ್ಟಡಗಳನ್ನು ಸುಪರ್ದಿಗೆ ತೆಗೆದುಕೊಳ್ಳಲು ತೆಲಂಗಾಣ ಮುಖಮಂತ್ರಿ ಯಾಕಿಷ್ಟು ಉತ್ಸಾಹ ತೋರುತ್ತಿದ್ದಾರೆ ಎಂಬುದು ನನಗೆ ಅರ್ಥವಾಗುತ್ತಿಲ್ಲ' ಎಂದು ಹಿರಿಯ ಪತ್ರಕರ್ತ ಹಾಗೂ ರಾಜಕೀಯ ವಿಶ್ಲೇಷಕ ತೇಲಕಪಲ್ಲಿ ರವಿ 'ಪ್ರಜಾವಾಣಿ'ಗೆ ಹೇಳಿದ್ದಾರೆ.
'ವಿಧಾನಸಭೆ ಚುನಾವಣೆ ಫಲಿತಾಂಶ ಜೂನ್ 4ರಂದು ಪ್ರಕಟವಾಗಲಿದ್ದು, ಆಂಧ್ರ ಪ್ರದೇಶದಲ್ಲಿ ಪೂರ್ಣಪ್ರಮಾಣದ ಸರ್ಕಾರ ರಚನೆಯೂ ಆಗಿರುವುದಿಲ್ಲ. ಸುಸಜ್ಜಿತ ಕಟ್ಟಡಗಳನ್ನು ಹೊಂದಿ, ಆಡಳಿತ ನಡೆಸಲು ನೂತನ ಸರ್ಕಾರಕ್ಕೆ ಸಮಯ ಬೇಕಾಗುತ್ತದೆ' ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.