ತೆಲಂಗಾಣ: ಆನ್ಲೈನ್ ಗೇಮ್ ಎಲ್ಲ ಯುವಕರ ಗೀಳಾಗಿದೆ. ಸುಲಭವಾಗಿ ಹಣ ಮಾಡಬಹುದು ಎಂಬ ದುರಾಸೆಯಿಂದ ಇಂದಿನ ಯುವ ಪೀಳಿಗೆ ಈಗ ಆನ್ಲೈನ್ ಗೇಮ್ಗಳಿಗೆ ಮೊರೆ ಹೋಗುತ್ತಿದ್ದಾರೆ. ಇನ್ನೂ, ಆನ್ ಲೈನ್ ಗೇಮ್ ಗಳಲ್ಲಿ ಹಣ ಗೆದ್ದವರಿಗಿಂತ ಹಣ ಕಳೆದುಕೊಂಡವರೆ ಹೆಚ್ಚು. ಎಷ್ಟೋ ಯುವಕರು ಈ ಆನ್ ಲೈನ್ ಗೇಮ್ ನಿಂದ ಲಕ್ಷಾಂತರ ರೂಪಾಯಿ ದುಡ್ಡು ಕಳೆದುಕೊಂಡು ಬೀದಿ ಪಾಲಾದರೆ, ಕೆಲವರು ಆತ್ಮಹತ್ಯೆಯ ದಾರಿ ಕೂಡ ಹಿಡಿದಿದ್ದಾರೆ.
ಇಂತಹದ್ದೇ ಘಟನೆ ತೆಲಂಗಾಣದಲ್ಲಿ ನಡೆದಿದೆ.ಬೆಟ್ಟಿಂಗ್ ಚಟದಿಂದ ಕೋಟ್ಯಂತರ ರೂಪಾಯಿ ಹಣವನ್ನು ಕಳೆದುಕೊಂಡ ಮಗನನ್ನು ಸಿಟ್ಟಿನಲ್ಲಿ ಕಬ್ಬಿಣದ ರಾಡ್‌ನಿಂದ ಹಲ್ಲೆ ಮಾಡಿ ಹತ್ಯೆಗೈದಿರುವ ಭಯಾನಕ ಘಟನೆ ತೆಲಂಗಾಣದ ಮೇದಕ್ ಜಿಲ್ಲೆಯಲ್ಲಿ ಶನಿವಾರ ರಾತ್ರಿ ನಡೆದಿದೆ.
ಮೇದಕ್ ಜಿಲ್ಲೆಯ ಚಿನ್ನಶಂಕರಂಪೇಟೆ ತಾಲ್ಲೂಕಿನ ಬಗೀರತಪಲ್ಲಿ ಮೂಲದ ಮುಖೇಶ್ ಕುಮಾರ್ (28) ಈತ ರೈಲ್ವೆ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದ. ಈತನಿಗೆ ಇಬ್ಬರು ಮಕ್ಕಳಿದ್ದಾರೆ. ಇವರು ಆನ್ಲೈನ್ ಗೇಮಿಂಗ್ ಚಟಕ್ಕೆ ಬಿದಿದ್ದ. . ಬೆಟ್ಟಿಂಗ್‌ನಿಂದಾಗಿ ಮನೆ, ಸೈಟ್ ಮಾರಾಟ ಮಾಡಿದ್ದರು. ಬೆಟ್ಟಿಂಗ್ ಚಟವನ್ನು ಬಿಡುವಂತೆ ಹಲವು ಬಾರಿ ಎಚ್ಚರಿಕೆ ನೀಡಿದ್ದಾರೆ. ಆದರೂ ತನ್ನ ಬುದ್ದಿ ಬದಲಿಸಿಕೊಳ್ಳದ ಮುಖೇಶ್ ಸುಮಾರು 2 ಕೋಟಿ ಹಣವನ್ನು ಕಳೆದುಕೊಂಡಿದ್ದಾನೆ.
ಎಷ್ಟು ಸಲ ಹೇಳಿದರೂ ತನ್ನ ಬುದ್ದಿಯನ್ನು ಬದಲಾಯಿಸಿಕೊಳ್ಳದ ಮಗನ ಮೇಲೆ ಅಪ್ಪನಿಗೆ ಕೋಪ ಬಂದಿದೆ. ಸತ್ಯನಾರಾಯಣ ಶನಿವಾರ ರಾತ್ರಿ ಮಗ ಮುಖೇಶ್ ಮೇಲೆ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿದ್ದಾನೆ. ಇದರ ಪರಿಣಾಮ ಮುಖೇಶ್ ಕುಮಾರ್ ತೀವ್ರ ಗಾಯಗೊಂಡು ಮೃತಪಟ್ಟಿದ್ದಾನೆ. ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.