ಯಿಟ್ಟಲದ ಉಕ್ಕಡದಿಂದ ಒಂದು ಹರಿದಾರಿ ಪಡುವಲಿಗೆ ಅನೆಕಲ್ಲಿನ ಹೊಳೆಯ ದಡದಲ್ಲಿ ನಂದಿಗುಡ್ಡವೆಂಬ ಒಂದು ಗುಡ್ಡವು ಮುಗಿಲನ್ನು ತೂರುತ್ತಿತ್ತು. ಅದರ ತಳದಲ್ಲಿ ನಿಂತ ನಂದಿಯಾಕಾರದ ಒಂದು ಶಿಲೆಯಿಂದ ಜನರು ಆ ಗುಡ್ಡವನ್ನು ನಂದಿಗುಡ್ಡವೆಂದು ಕರೆಯುತ್ತಿದ್ದರು. ಅಲ್ಲಿಯೇ ಒಂದು ಬಾವಿ. ಬಡಗು ದಿಕ್ಕಿನಲ್ಲಿ ಒಂದು ಹಳ್ಳ. ಮೂರು ಕಡೆಗಳಲ್ಲಿ ಎತ್ತರವಾದ ಬೆಟ್ಟಗಳು, ಬಳಿಯ ಒಂದು ದೊಡ್ಡ ಬಂಡೆಯಲ್ಲಿ ಕೊರೆದ ಭವ್ಯವಾದ ಮೂರು ಸುರಂಗಗಳು. ಅನತಿ ದೂರದಲ್ಲಿ ಹಳೆಗಾಲದ ಬಕನ ಗುಹೆ. ಬಕಾಸುರನು ರಕ್ ಕಾರಿದ ನೆತ್ತರ ಕೆರೆಯೂ ಅಲ್ಲೇ ಇದೆ.
ಈ ಆಯತ ಸ್ಥಳದಲ್ಲಿ ಮಾಯಿಲರೊಡೆಯ ನಂದನು ವಾಸವಾಗಿದ್ದನು. ನಂದಿಗುಡ್ಡದಿಂದ ಎರುಂಬಿನ ಗುಡ್ಡದವರೆಗೆ ಕೋಟೆಕೊತ್ತಳಿಗಳನ್ನು ಕಟ್ಟಿಸಿ, ಕಿರಾತ ಪಡೆಯನ್ನಿಟ್ಟು, ಉಕ್ಕಡದಿಂದ ಕನ್ಯಾನದವರೆಗೆ ಅರಸನೆಂದೆನಿಸಿಕೊಂಡಿದ್ದನು. ಅವನು ಪುಂಡುಪೋಕರಿಯಾಗಿ ಅಂಡಲೆಯುತ್ತಿದ್ದನು.ಗುಡಿಗೋಪುರಗಳಲ್ಲಿ ರಕ್ತ ಮಾಂಸವನ್ನು ಚೆಲ್ಲಿ ಹೊರಗೆಯ್ದು ರತ್ನಾಭರಣಗಳನ್ನು ದೋಚುತ್ತಿದ್ದನು. ಮಾನಿನಿಯರ ಮಾನವನ್ನು ಕೆಡಿಸುತ್ತಿದ್ದನು. ಮನೆಮಠಗಳನ್ನು ಹಾಡೆ ಹಗಲಲ್ಲೇ ಕೊಳ್ಳೆಯಿಡುತ್ತಿದ್ದನು. ಈ ಲೂಟಿಯ ಮಾರಿ ಮೀಟನ ಮಾಯಿಲನಿಂದ ಜನರೆಲ್ಲ ಬವಣೆ ಬಡುತ್ತಿದ್ದರು.
* ರಂಗಯ್ಯ ಬಲ್ಲಾಳನು ದಂಡಿಗೆ ಹೋದ ಸುದ್ದಿಯನ್ನು ಕೇಳಿ ನಂದನ ಉಕ್ಕು ಮಿಕ್ಕು ಮೀರಿತು. ಇನ್ನು ತನಗೆ ಯಾರ ಅಂಕೆ ಆಜ್ಞೆಯೂ ಇಲ್ಲ, ಇನ್ನು ತಾನು ಆಡಿದ್ದೆಲ್ಲ ಆಟವೆಂದೆಣಿಸಿ ಆ ಪುಂಡನು ಚಿಪ್ಪಾರು ಬೀಡಿನ ಮೇಲೆಯೇ ಕೈಯಿಕ್ಕಿದನು. ಲಿಂಗಾಯಿಯನ್ನು ಮೊದಲೇ ಕಂಡಿದ್ದನು. ಅವಳ ರೂಪರಾಶಿಗೆ ಮರುಳಾಗಿದ್ದೆನು. ಅವಳನ್ನು ಎಂತಾದರೂ ಅಪಹರಿಸಿ ತನ್ನ ದಾರವಟ್ಟಕ್ಕೆ ಸೇರಿಸಿ ಕೊಳ್ಳಬೇಕೆಂದು ಆಳಿಪುತ್ತಿದ್ದನು.
ಅವನ ಆ ಬಾಕುಳಿತನಕ್ಕೆ ಈಗ ಒಳ್ಳೆಯ ಎಡೆ ದೊರೆತಂತಾಯಿತು. ಅವನು ಒಳ್ಳಾಗಿ ಸಿಂಗರಿಸಿಕೊಂಡು ಎಡೆಯಾಡತೊಡಗಿದನು. ಅವನ ದೇಹ ಕರಿಯ ಕಲ್ಲಿನಲ್ಲಿ ಕಡೆದಂತಿತ್ತು. ಬಿಳಿಯ ವೀರ ಕಸೆಯನ್ನುಟ್ಟು, ಪಟ್ಟಿಯ ದಗಲೆಯನ್ನು ತೊಟ್ಟು, ತಲೆವರಿಗೆಯನ್ನಿಟ್ಟಿದ್ದನು. ಮುಂದಲೆಯ ಮೇಲೆ ಮುತ್ತಿನ ಕುಚ್ಚು ಕುಣೆಯುತ್ತಿತ್ತು. ನಡುವಿಗೆ ಸಿಕ್ಕಿಸಿದ ಕತ್ತಿ ಜಗಜಗಿಸುತ್ತಿತ್ತು, ಕೊರಳಲ್ಲಿ ರತ್ನ ಹಾರ, ತೋಳುಗಳಲ್ಲಿ ಬಾಪುರಿ ಹೊಳೆಯುತ್ತಿತ್ತು. ಕಂಡವರೆಲ್ಲ ಅಲ್ಲಲ್ಲಿ ನಿ0ತು ಅವನ ಗಂಡುಗಾಡಿಯನ್ನು ಕಂಡು ಬೆಕ್ಕಸಬೆರಗಾಗುತ್ತಿದ್ದರು.
ಂಪ್ಪಾರಿಗೆ ಹೋಗಿ ಕಗ್ಗಲ್ಲ ಕೋಟೆಯನ್ನೊಮ್ಮೆ ನೋಡಿದನು. ಅದರ ಒಂದೊಂದು ಕಲ್ಲನ್ನು ಅಲುಗಾಸಬೇಕಾದರೆ ಆನೆಯೇ ಬೇಕಾಗಿತ್ತು. ಆ ಅಬೇಧ್ಯವಾದ ಕೋಟೆಯನ್ನು ಕಂಡು ಎದೆಗುಂದಿದನು. ಕೋಟೆಯನ್ನು ಭೇದಿಸುವುದು ಅಸಾಧ್ಯವೆನಿಸಿದಷ್ಟೂ ಲಿಂಗಾಯಿಯ ಮೇಲಿನ ಅವನ ಅಳಿಯಾಸೆಯು ತೀವ್ರವಾಯಿತು.
ಅನ್ನ ನೀರಿಲ್ಲದೆ, ಉರಿ ಬಿಸಿಲೆನ್ನದೆ, ಕರುಳಿಗೆ ನಾಚಿಕೆಯೆಂಬುದಿಲ್ಲದೆ ಆ ಭಂಡನು ಕೋಟೆಯ ಹೊರ ಸುತ್ತನ್ನೆಲ್ಲ ಸುತ್ತಾಡಿದನು. ಸುತ್ತಿ ಸುತ್ತಿ ಒಂದು ಸಂದಿನಲ್ಲಿ ಒಂದು ಕಳ್ಳಗಂಡಿಯನ್ನು ಕಂಡನು. ಆ ಕಂಡಿಯೊಳಗೆ ನುಗ್ಗಿ ನುಸುಳಿ ಕತ್ತಲೆಯ ಒಂದು ಬಿಲದ್ವಾರವನ್ನುಹೊಕ್ಕನು. ಲಿಂಗಾಯಿಯನ್ನು ಬಣ್ಣದ ಮಾತುಗಳಿಂದ ಕರೆದನು; ಲಾಲಸೆಯ ಬಲೆಯನ್ನು ಬೀಸಿದನು. ಅವನ ಮಾತುಗಳೇ ಆ ಕಗ್ಗಲ್ಲ ಸುರಂಗದಲ್ಲಿ ಮರುದನಿಗೊಂಡಿತಲ್ಲದೆ ಲಿಂಗಾಯಿಯ ದನಿ ಕೇಳಿಸಲಿಲ್ಲ. ಅವಳ ನೆರಳಾದರೂ ಅವನ ಕಣ್ಣಿಗೆ ಬೀಳಲಿಲ್ಲ.
ಬಳಿಕ ಕೋಪಗೊಂಡು ‘ಒಳ್ಳೆಯ ಮಾತಿನಲ್ಲಿ ಬಾಗಿಲು ತೆರೆ! ಇಲ್ಲವಾದರೆ ಬಾಗಿಲನ್ನೊಡೆದು ಒಳ ನುಗ್ಗುವೆನೆಂದು ಸಿಡಿದಾಡಿದನು. ಆಗಲೂ ಉತ್ತರವಿಲ್ಲ.ನಂದನ ಸಿಟ್ಟು ನೆತ್ತಿಗೇರಿತು. ಒಳಮನೆಯ ಪೆರ್ಗದವನ್ನು ಬಲವಾಗಿ ಒದ್ದನು. ಆ ಒದೆಯ ಭರಕ್ಕೆ ಕೋಣೆಯೆಲ್ಲ ಅದುರಿತು. ಜಂತ್ರದ ಕಳ್ಳಿಗಂಡಿಯ ಬಾಗಿಲು ಬಿದ್ದು ತಾನಾಗಿ ಮುಚ್ಚಿಕೊಂಡಿತು. ಬೋನಿನಲ್ಲಿ ಬಿದ್ದ ಹುಲಿಯಂತೆ ನಂದನು ನಂದನು ಆ ಯಮಗುಂಡದಲ್ಲಿ ಸಿಕ್ಕಿಬಿದ್ದನು.
(ನಾಳೆಗೆ ಮುಂದುವರಿಯುವುದು.)