ತಿರುವನಂತಪುರ: ಕೇರಳ ಸರ್ಕಾರವು ಅತಿ ಹೆಚ್ಚು ವಿದ್ಯುತ್ ಬಳಸುವ ಸಮಯದಲ್ಲಿ ಸ್ವಯಂ ನಿಯಂತ್ರಿಸಲು ಕೆಲ ಸೂಚನೆಗಳನ್ನು ಹೊರಡಿಸಿದ್ದರಿಂದ ಮೇ 3ರಂದು 200 ಮೆಗಾವಾಟ್ ವಿದ್ಯುತ್ ಉಳಿತಾಯವಾಗಿದೆ ಎಂದು ಅಲ್ಲಿನ ರಾಜ್ಯ ಸರ್ಕಾರ ತಿಳಿಸಿದೆ.
ಗ್ರಾಹಕರು, ಅದರಲ್ಲೂ ದೊಡ್ಡ ಕೈಗಾರಿಕೆಗಳ ಸಹಕಾರದಿಂದ ಇದು ಸಾಧ್ಯವಾಗಿದೆ ಎಂದು ರಾಜ್ಯ ಇಂಧನ ಸಚಿವ ಕೆ.ಕೃಷ್ಣನ್‌ಕುಟ್ಟಿ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕೇರಳ ರಾಜ್ಯ ವಿದ್ಯುತ್ ಮಂಡಳಿ (ಕೆಎಸ್‌ಇಬಿ) ಪ್ರಸ್ತಾಪಿಸಿರುವ ನಿರ್ಬಂಧಗಳು ಗೃಹ ವಿದ್ಯುತ್ ಗ್ರಾಹಕರ ಮೇಲೆ ಪರಿಣಾಮ ಬೀರದಂತೆ ನೋಡಿಕೊಳ್ಳಲು ಸರ್ಕಾರ ಯತ್ನಿಸುತ್ತಿದೆ ಎಂದು ಸಚಿವರು ಪ್ರತಿಕ್ರಿಯಿಸಿದರು.
'ವಿದ್ಯುತ್ ಉಳಿತಾಯಕ್ಕೆ ಸಂಬಂಧಿಸಿದಂತೆ ಎಲ್ಲರೂ ಸ್ವಯಂ ನಿರ್ಬಂಧಗಳನ್ನು ಹೇರಿಕೊಂಡು, ಸಹಕಾರ ನೀಡಬೇಕು. ಮಾಧ್ಯಮಗಳು ಇದನ್ನು ಅಭಿಯಾನವಾಗಿಸಬೇಕು. ಇಲ್ಲದಿದ್ದರೆ ನಾವೆಲ್ಲರೂ ವಿದ್ಯುತ್ ತೊಂದರೆಗಳನ್ನು ಎದುರಿಸಬೇಕಾಗುತ್ತದೆ' ಎಂದು ಅವರು ಹೇಳಿದರು.
ರಾತ್ರಿ 10ರಿಂದ 2 ಗಂಟೆಯವರೆಗಿನ ಹೆಚ್ಚು ಬೇಡಿಕೆಯ ಅವಧಿಯಲ್ಲಿ ಕೆಲ ಪ್ರಸ್ತಾಪಿತ ನಿರ್ಬಂಧಗಳನ್ನು ಕೆಎಸ್‌ಇಬಿ ಹೊರತಂದಿದೆ. ರಾತ್ರಿ 9ರ ಬಳಿಕ ವಾಣಿಜ್ಯ ಸಂಸ್ಥೆಗಳು ದೀಪಗಳನ್ನು ಆರಿಸಬೇಕು ಮತ್ತು ಹವಾನಿಯಂತ್ರಿತ ತಾಪಮಾನವನ್ನು 26 ಡಿಗ್ರಿ ಸೆಲ್ಸಿಯಸ್ ಅಥವಾ ಅದಕ್ಕಿಂತ ಹೆಚ್ಚು ಹೊಂದಿಸುವಂತೆ ಸೂಚಿಸಿದೆ ಎಂದು ಸಚಿವರು ವಿವರಿಸಿದರು.