ಕೊಚ್ಚಿ: ಯಾವುದೇ ಎಚ್ಚರಿಕೆ ನೀಡದೆ ಏರ್ ಇಂಡಿಯಾ ಎಕ್ಸ್ ಪ್ರೆಸ್ ನ ನೌಕರರು ಇಂದು ಹಠಾತ್ ಮುಷ್ಕರ ನಡೆಸಿದ್ದು ಸೇವೆಗಳನ್ನು ರದ್ದುಗೊಳಿಸಬೇಕಾಯಿತು ಎಂದು ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿವರಿಸಿದೆ.
ಕೇರಳದ ಹೊರತಾಗಿ, ಗಲ್ಫ್ ಪ್ರದೇಶಗಳಲ್ಲಿ ಸೇವೆಯನ್ನು ರದ್ದುಗೊಳಿಸಲಾಗಿದೆ. ದೇಶದಲ್ಲಿ 70ಕ್ಕೂ ಹೆಚ್ಚು ಸೇವೆಗಳನ್ನು ರದ್ದುಗೊಳಿಸಲಾಗಿದೆ. ಮುನ್ನೆಚ್ಚರಿಕೆ ಇಲ್ಲದೆ ರದ್ದುಗೊಳಿಸಿದ್ದರಿಂದ ನೂರಾರು ಪ್ರಯಾಣಿಕರು ಪರದಾಡಿದರು.
ನೌಕರರು ಸಾಮೂಹಿಕ ರಜೆ ಹಾಕಿರುವುದು ಹಾಗೂ ಮೊಬೈಲ್ ಪೋನ್ ಸ್ವಿಚ್ ಆಫ್ ಆಗಿರುವುದು ಸೇವಾ ಬಿಕ್ಕಟ್ಟಿಗೆ ಕಾರಣವಾಗಿದೆ. ಸೇವೆಗೆ ಮುಂಚೆಯೇ ಸುಮಾರು 300 ಹಿರಿಯ ಕ್ಯಾಬಿನ್ ಸಿಬ್ಬಂದಿಗಳು ಅನಾರೋಗ್ಯ ಕಾರಣ ನೀಡಿ ರಜೆ ತೆಗೆದುಕೊಂಡರು. ಬಳಿಕ ಎಲ್ಲರೂ ಮೊಬೈಲ್ ಸ್ವಿಚ್ ಆಫ್ ಮಾಡಿದ್ದಾರೆ.
ಘಟನೆಗೆ ಏರ್ ಇಂಡಿಯಾ ಎಕ್ಸ್ ಪ್ರೆಸ್ ಪ್ರಯಾಣಿಕರಿಗೆ ವಿಷಾದ ವ್ಯಕ್ತಪಡಿಸಿದೆ. ಪ್ರಯಾಣಿಕರಿಗೆ ಮರುಪಾವತಿ ಮಾಡಲಾಗುವುದು ಮತ್ತು ಬುಕ್ಕಿಂಗ್‍ಗೆ ಅವಕಾಶ ನೀಡಲಾಗುವುದು ಎಂದು ಕಂಪನಿ ತಿಳಿಸಿದೆ. ಭತ್ಯೆ ಸೇರಿದಂತೆ ಕೆಲಸಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ನೌಕರರು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.
ಸೇವೆ ರದ್ದಾದ ಮಾಹಿತಿ ಮೊದಲು ಹೊರಬಿದ್ದಿದ್ದು ಕೇರಳದ ಕಣ್ಣೂರು ವಿಮಾನ ನಿಲ್ದಾಣದಲ್ಲಿ. ನಂತರ ನೆಡುಂಬಶ್ಶೇರಿ ಮತ್ತು ಕರಿಪ್ಪೂರ್ ವಿಮಾನ ನಿಲ್ದಾಣಗಳಲ್ಲೂ ಸೇವೆಯನ್ನು ರದ್ದುಗೊಳಿಸಲಾಯಿತು. ತಿರುವನಂತಪುರಂನಲ್ಲೂ ಸೇವೆಯನ್ನು ನಿಲ್ಲಿಸಲಾಯಿತು. ಮಸ್ಕತ್, ದುಬೈ, ಅಬುಧಾಬಿ, ಬಹ್ರೇನ್, ಶಾರ್ಜಾ ಮತ್ತು ದಮ್ಮಾಮ್ ಸೇವೆಗಳನ್ನು ರದ್ದುಗೊಳಿಸಲಾಗಿದೆ. ಘಟನೆಯಲ್ಲಿ ವಿಮಾನಯಾನ ಪ್ರಾಧಿಕಾರ ಮಧ್ಯಪ್ರವೇಶಿಸಿದೆ.