ಹೈದರಾಬಾದ್: ಕಳ್ಳಸಾಗಣೆಗೆ ಒಳಗಾಗಿ, ಕಾಂಬೋಡಿಯಾದಲ್ಲಿ ಬಂಡಾಯವೆದ್ದು ಜೈಲುಪಾಲಾಗಿರುವ ಸುಮಾರು 300 ಭಾರತೀಯ ಯುವಕರನ್ನು ದೇಶಕ್ಕೆ ಮರಳಿ ಕರೆತರಲು ವಿಶಾಖಪಟ್ಟಣದ ಪೊಲೀಸರು ಪ್ರಯತ್ನಗಳನ್ನು ನಡೆಸುತ್ತಿದ್ದಾರೆ.
ಸ್ಥಳೀಯ ವ್ಯಕ್ತಿಯ ದೂರಿನ ಮೇರೆಗೆ ವಿಶಾಖಪಟ್ಟಣದ ಪೊಲೀಸರು, ಮಾನವ ಕಳ್ಳಸಾಗಣೆ ಮಾಡಿ ಸೈಬರ್ ಅಪರಾಧ ಚಟುವಟಿಕೆಯಲ್ಲಿ ತೊಡಗಿಸುತ್ತಿರುವ ಜಾಲವನ್ನು ಭೇದಿಸಲು ಏಳು ವಿಶೇಷ ತಂಡಗಳನ್ನು ರಚಿಸಿದ್ದಾರೆ.
ಈ ಪ್ರಕರಣ ಸಂಬಂಧ ಮೇ 18ರಂದು, ಸ್ಥಳೀಯ ಏಜೆಂಟ್‌ರಾದ ಚುಕ್ಕಾ ರಾಜೇಶ್ ವಿಜಯ್ ಕುಮಾರ್, ಮಣ್ಣೇನಾ ಜ್ಞಾನೇಶ್ವರ ರಾವ್, ಸುಬ್ಬವಾರಪು ಕೊಂಡಾಲ ರಾವ್ ಎಂಬುವರನ್ನು ಬಂಧಿಸಲಾಗಿದೆ.
ಈ ಆರೋಪಿಗಳು, ಸಿಂಗಪುರದಲ್ಲಿ ಡಾಟಾ ಎಂಟ್ರಿ ಉದ್ಯೋಗ ಕೊಡಿಸುವುದಾಗಿ ಭಾರತದ ಯುವಕರನ್ನು ನಂಬಿಸಿ, ಅವರನ್ನು ಸೈಬರ್ ಅಪರಾಧದಲ್ಲಿ ತೊಡಗಿಸಲು ಸಿಂಗಪುರ ಮತ್ತು ಬ್ಯಾಂಕಾಕ್ ಮೂಲಕ ಕಾಂಬೋಡಿಯಾಕ್ಕೆ ಕಳುಹಿಸಿಕೊಡುತ್ತಿದ್ದರು. ಕಳ್ಳಸಾಗಣೆಗೆ ಒಳಗಾಗಿರುವ ಯುವಕರ ಹೆಸರು ಮತ್ತು ವಿವರಗಳನ್ನು ಆರೋಪಿಗಳು ವಿಚಾರಣೆ ವೇಳೆ ಒದಗಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಕಳ್ಳಸಾಗಣೆ ಮಾಡಲಾದ ಯುವಕರನ್ನು ಕಾಂಬೋಡಿಯಾದಲ್ಲಿ ಸೆರೆಯಲ್ಲಿ ಇರಿಸಿ, ಚಿತ್ರಹಿಂಸೆ ನೀಡಲಾಗುತ್ತಿದೆ. ಅಲ್ಲದೆ, ಇವರಿಂದ ಭಾರತೀಯರ ಮೇಲೆ ಸೈಬರ್ ಅಪರಾಧ ಗಳನ್ನು ಮಾಡುವಂತೆ ಒತ್ತಡ ಹೇರಲಾಗುತ್ತಿದೆ. ಎಲ್ಲರ ಪಾಸ್‌ಪೋರ್ಟ್ ಗಳನ್ನು ಕಸಿದುಕೊಳ್ಳಲಾಗಿದೆ. ಕುಟುಂಬಗಳ ಸದಸ್ಯರೊಂದಿಗೂ ಮಾತನಾಡಲು ಅವಕಾಶ ನೀಡುತ್ತಿಲ್ಲ ಎನ್ನುವುದು ತನಿಖೆಯಲ್ಲಿ ಗೊತ್ತಾಗಿದೆ ಎಂದು ಹೇಳಿದ್ದಾರೆ.
ಕಳ್ಳಸಾಗಣೆಗೆ ಒಳಗಾಗಿರುವ ಭಾರತೀಯ ಯುವಕರು, ಸೈಬರ್ ಅಪರಾಧದ ಕೇಂದ್ರವೆಂದು ಹೇಳಲಾದ ಕಾಂಬೋಡಿಯಾದ ಜಿನ್‌ಬೆ ಮತ್ತು ಕಾಂಪೌಂಡ್, ಸಿಹಾನೌಕ್ವಿಲೆ ಯಲ್ಲಿ ದೊಡ್ಡ ಗಲಭೆಗಳನ್ನು ನಡೆಸಿದ್ದಾರೆ. ಸುಮಾರು 300 ಭಾರತೀಯರು ತಮ್ಮನ್ನು ನಿಯಂತ್ರಿಸುತ್ತಿರುವ ವ್ಯಕ್ತಿಗಳ ವಿರುದ್ಧ ಸೋಮವಾರ 'ದಂಗೆ' ಎದ್ದಿದ್ದಾರೆ'. ದಂಗೆಯ ವಿಡಿಯೊಗಳನ್ನು ವಿಶಾಖ ನಗರ ಪೊಲೀಸರ ವಾಟ್ಸ್ ಆಯಪ್ ಸಂಖ್ಯೆಗಳಿಗೆ ಕಳುಹಿಸಿದ್ದಾರೆ ಎಂದು ವಿಶಾಖಪಟ್ಟಣ ನಗರ ಪೊಲೀಸ್ ಆಯುಕ್ತ ಡಾ. ಎ. ರವಿಶಂಕರ್ ಅಯ್ಯನರ್ ಅವರು ತಿಳಿಸಿದರು.
'ಈ ಯುವಕರು ತಮ್ಮನ್ನು ಭಾರತಕ್ಕೆ ಮರಳಿ ಕರೆಸಿಕೊಳ್ಳುವಂತೆ ಮನವಿ ಮಾಡಿದ್ದಾರೆ. ಯುವಕರನ್ನು ದೇಶಕ್ಕೆ ಕರೆತರಲು ವಲಸೆ ವಿಭಾಗ, ವಿದೇಶಾಂಗ ವ್ಯವಹಾರಗಳ ಸಚಿವಾಲಯವನ್ನು ನಾವು ಸಂಪರ್ಕಿಸುತ್ತಿದ್ದೇವೆ' ಎಂದು ಅವರು ತಿಳಿಸಿದರು.
' 5 ಸಾವಿರ ಭಾರತೀಯರ ಕಳ್ಳಸಾಗಣೆ'
ಬಂಧಿತ ಮೂವರು ಏಜೆಂಟರು ನೀಡಿರುವ ಮಾಹಿತಿ ಆಧರಿಸಿ, ವಿಶಾಖಪಟ್ಟಣ ಮತ್ತು ಅದರ ಸುತ್ತಮುತ್ತಲಿನ ಸ್ಥಳಗಳಿಗೆ ಸೇರಿದ 150 ಯುವಕರನ್ನು ಕಾಂಬೋಡಿಯಾದಲ್ಲಿ ಪತ್ತೆಹಚ್ಚಲಾಗಿದೆ. ವಿವಿಧ ಏಜೆಂಟರ ಮೂಲಕ ದೇಶದಾದ್ಯಂತ ಸುಮಾರು 5,000 ಭಾರತೀಯರನ್ನು ಕಾಂಬೋಡಿಯಾಕ್ಕೆ ಕಳ್ಳಸಾಗಣೆ ಮಾಡಿರುವ ಮಾಹಿತಿ ಲಭಿಸಿದೆ ಎಂದು ವಿಶೇಷ ತನಿಖಾ ತಂಡಗಳ ನೇತೃತ್ವ ವಹಿಸಿರುವ ಜಂಟಿ ಪೊಲೀಸ್ ಆಯುಕ್ತ ಡಾ.ಫಕ್ಕೀರಪ್ಪ ಕಾಗಿನೆಲ್ಲಿ ಪಿಟಿಐ' ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
'ಕಳ್ಳಸಾಗಣೆಗೆ ತುತ್ತಾಗಿರುವ ಈ ಯುವಕರಿಗೆ ಕಾಂಬೋಡಿಯಾದಲ್ಲಿ ಹ್ಯಾಂಡ್ಲರ್‌ಗಳು, ಫೆಡೆಕ್ಸ್ ಹಗರಣಗಳು, ಸ್ಟಾಕ್ ಮಾರ್ಕೆಟ್ ವಂಚನೆಗಳು, ಟಾಸ್ಕ್ ಗೇಮ್ ವಂಚನೆಗಳು ಮತ್ತು ಭಾರತೀಯ ನಾಗರಿಕರ ಮೇಲೆ ವಿವಿಧ ರೀತಿಯ ಸೈಬರ್ ವಂಚನೆಗಳಂತಹ ವಿಶೇಷ ಸೈಬರ್ ಅಪರಾಧಗಳನ್ನು ನಡೆಸಲು ತರಬೇತಿಗೊಳಿಸಿರುವುದು ಗೊತ್ತಾಗಿದೆ' ಎಂದು ಅವರು ಮಾಹಿತಿ ನೀಡಿದರು.