ಹಮೀರ್ಪುರ್: ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರನ್ನು ಗೇಲಿ ಮಾಡಿರುವ ಕೇಂದ್ರ ಸಚಿವ ಅನುರಾಗ್ ಠಾಕೂರ್, ಲೋಕಸಭೆಯಲ್ಲಿ ಪ್ರಧಾನಿ ಮೋದಿ ಮಂಡಿಸಿರುವ ಶಾಸನ ಸಭೆಗಳಲ್ಲಿ ಮಹಿಳೆಯರಿಗೆ ಶೇಕಡ 33ರಷ್ಟು ಮೀಸಲಾತಿ ಮಸೂದೆಯು ಪ್ರಿಯಾಂಕಾ ಗಾಂಧಿ ನೆರವಿಗೆ ಬರಲಿದ್ದು, ಲೋಕಸಭಾ ಚುನಾವಣೆಗೆ ಪದಾರ್ಪಣೆ ಮಾಡಲು ಅನುಕೂಲವಾಗುತ್ತದೆ ಎಂದು ಹೇಳಿದ್ದಾರೆ.
ಪ್ರಿಯಾಂಕಾ ಪತಿ ರಾಬರ್ಟ್ ವಾದ್ರಾ ಸಹ ಕಾಂಗ್ರೆಸ್ ಟಿಕೆಟ್ ಪಡೆಯುವಲ್ಲಿ ವಿಫಲರಾದ ಬಗ್ಗೆಯೂ ವ್ಯಂಗ್ಯ ಮಾಡಿದ್ದಾರೆ.
ಪಿಟಿಐ ಸಂದರ್ಶನದಲ್ಲಿ ಮಾತನಾಡಿರುವ ಅವರು, ಗಾಂಧಿ ಕುಟುಂಬವನ್ನು ಸಕ್ರಿಯ ರಾಜಕಾರಣಕ್ಕೆ ಆಹ್ವಾನಿಸುತ್ತೇನೆ. ಏಕೆಂದರೆ, ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದೇಶಕ್ಕೆ ಬಲಿಷ್ಠ ವಿರೋಧ ಪಕ್ಷದ ಅಗತ್ಯವಿದೆ ಎಂದು ಹೇಳಿದ್ದಾರೆ.
ರಾಹುಲ್ ಗಾಂಧಿ ಅಮೇಠಿ ಬಿಟ್ಟು ತನ್ನ ತಾಯಿ ಪ್ರತಿನಿಧಿಸುತ್ತಿದ್ದ ರಾಯ್ ಬರೇಲಿಗೆ ಓಡಿ ಹೋಗಿದ್ದಾರೆ ಎಂದು ಕುಟುಕಿದ್ದಾರೆ.
ಪ್ರಿಯಾಂಕಾ ಗಾಂಧಿ ಅಸಾಧಾರಣ ವಿರೋಧ ಪಕ್ಷದ ನಾಯಕಿ ಎಂದು ಬಿಜೆಪಿ ಪರಿಗಣಿಸುತ್ತದೆಯೇ ಎಂಬ ಪ್ರಶ್ನೆಗೆ, ಅದನ್ನು ಜನ ನಿರ್ಧರಿಸುತ್ತಾರೆ ಎಂದಿದ್ದಾರೆ.
'ಕಾಂಗ್ರೆಸ್‌ನಲ್ಲಿ ಏನಾಗುತ್ತಿದೆ ಎಂಬುದು ಅರ್ಥವಾಗುತ್ತಲೇ ಇಲ್ಲ. ಒಬ್ಬರು(ರಾಬರ್ಟ್ ವಾದ್ರಾ) ಟಿಕೆಟ್ ಕೇಳಿದ್ದರು. ಆದರೆ, ಅವರಿಗೆ ಸಿಕ್ಕಿಲ್ಲ. ಮತ್ತೊಬ್ಬರು ನಾನು ಮಹಿಳೆ(ಪ್ರಿಯಾಂಕಾ ಗಾಂಧಿ), ಹೋರಾಟ ಮಾಡಬಲ್ಲೆ ಎನ್ನುತ್ತಾರೆ. ಆದರೆ, ಅವರಿಗೂ ಟಿಕೆಟ್ ಕೊಟ್ಟಿಲ್ಲ. ಬಹುಶಃ ಮೋದಿ ಜಾರಿ ಮಾಡಲಿರುವ ಶೇಕಡ 33ರಷ್ಟು ಮಹಿಳಾ ಮೀಸಲಾತಿ ಕಾಯ್ದೆ ಪ್ರಿಯಾಂಕಾ ನೆರವಿಗೆ ಬರಲಿದೆ' ಎಂದಿದ್ದಾರೆ.