ಜಮ್ಮು: ದೇಶದ ವಿವಿಧೆಡೆ ವಲಸೆ ಹೋಗಿರುವ 26 ಸಾವಿರಕ್ಕೂ ಹೆಚ್ಚಿನ ಕಾಶ್ಮೀರಿ ಪಂಡಿತರು ಮತದಾನ ಮಾಡಲು ಅನುಕೂಲವಾಗುವಂತೆ ದೆಹಲಿ, ಜಮ್ಮು ಮತ್ತು ಉಧಮ್‌ಪುರಗಳಲ್ಲಿ ಒಟ್ಟು 34 ಮತಗಟ್ಟೆಗಳನ್ನು ಆಯೋಗವು ಸ್ಥಾಪಿಸಿದೆ. ಶನಿವಾರ ನಡೆಯಲಿರುವ ಆರನೇ ಹಂತದ ಮತದಾನದ ವೇಳೆ ಈ ಜನರು ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಲೋಕಸಭಾ ಕ್ಷೇತ್ರಕ್ಕೆ ಮತದಾನ ಮಾಡಲಿದ್ದಾರೆ.
ಈಗಾಗಲೇ ಜಮ್ಮು ಮತ್ತು ಕಾಶ್ಮೀರದ ನಾಲ್ಕೂ ಲೋಕಸಭಾ ಕ್ಷೇತ್ರಗಳಿಗೆ ಮತದಾನ ಮುಗಿದಿದೆ. ಕಾಶ್ಮೀರಿ ಪಂಡಿತರ ಮತದಾನದ ಬಳಿಕ ಇಲ್ಲಿನ ಮತದಾನ ಪ್ರಕ್ರಿಯೆಯು ಪೂರ್ಣಗೊಳ್ಳಲಿದೆ. ಈ ಎಲ್ಲರೂ ಮತಪತ್ರದ ಮೂಲಕ ಮತದಾನ ಮಾಡಲಿದ್ದಾರೆ.
ಜಮ್ಮುವಿನಲ್ಲಿ 21 ಮತಗಟ್ಟೆ ಹಾಗೂ 8 ಸಹಾಯಕ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಉಧಮ್‌ಪುರದಲ್ಲಿ ಒಂದು ಹಾಗೂ ದೆಹಲಿಯಲ್ಲಿ ನಾಲ್ಕು ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಎಲ್ಲ ಕಾಶ್ಮೀರಿ ಪಂಡಿತರು ಮತಗಟ್ಟೆಗೆ ಬಂದು ಮತದಾನ ಮಾಡಬೇಕು ಎಂದು ಆಯೋಗ ಕೋರಿಕೊಂಡಿದೆ. ಹೆಚ್ಚು ನಿರಾಶ್ರಿತರು ಇರುವ ಪ್ರದೇಶಗಳನ್ನು ಗಮನದಲ್ಲಿ ಇಟ್ಟುಕೊಂಡು ವಾಹನ ವ್ಯವಸ್ಥೆಯನ್ನೂ ಆಯೋಗ ಮಾಡಿದೆ.