ಅಹಮದಾಬಾದ್: ಗುಜರಾತ್‌ನಲ್ಲಿ ಈ ಬಾರಿ ಲೋಕಸಭಾ ಚುನಾವಣೆಯ ಕಣದಲ್ಲಿ 35 ಮಂದಿ ಮುಸ್ಲಿಂ ಅಭ್ಯರ್ಥಿಗಳು ಇದ್ದಾರೆ. ಕಾಂಗ್ರೆಸ್ ಪಕ್ಷವು ಮುಸ್ಲಿಂ ಸಮುದಾಯದ ಯಾವುದೇ ಅಭ್ಯರ್ಥಿಯನ್ನು ಸ್ಪರ್ಧೆಗಿಳಿಸಿಲ್ಲ.
ಕಾಂಗ್ರೆಸ್, ಈ ಹಿಂದಿನ ಚುನಾವಣೆಗಳಲ್ಲಿ ಭರೂಚ್ ಕ್ಷೇತ್ರದಿಂದ ಮುಸ್ಲಿಮ್ ಅಭ್ಯರ್ಥಿಯನ್ನು ಕಣಕ್ಕಿಳಿಸಿತ್ತು.
ರಾಷ್ಟ್ರೀಯ ಪಕ್ಷಗಳಲ್ಲಿ ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಹೊರತುಪಡಿಸಿ ಇತರ ಪಕ್ಷಗಳು ಮುಸ್ಲಿಮರಿಗೆ ಮಣೆ ಹಾಕಿಲ್ಲ. ಮಾಯಾವತಿ ನೇತೃತ್ವದ ಬಿಎಸ್‌ಪಿಯು ಗಾಂಧಿನಗರ ಕ್ಷೇತ್ರದಲ್ಲಿ ಮೊಹಮ್ಮದ್ ಅನೀಸ್ ದೇಸಾಯಿ ಅವರಿಗೆ ಟಿಕೆಟ್ ನೀಡಿದೆ.
ಚುನಾವಣಾ ಆಯೋಗದ ಮಾಹಿತಿ ಪ್ರಕಾರ 2019ರ ಚುನಾವಣೆಯಲ್ಲಿ ಗುಜರಾತ್‌ನಲ್ಲಿ 43 ಮುಸ್ಲಿಂ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಈ ಬಾರಿ ಕಣದಲ್ಲಿರುವ ಮುಸ್ಲಿಂ ಅಭ್ಯರ್ಥಿಗಳಲ್ಲಿ ಬಹುತೇಕರು ಪಕ್ಷೇತರರಾಗಿ ಸ್ಪರ್ಧಿಸುತ್ತಿದ್ದಾರೆ. ಕೆಲವರು ಸ್ಥಳೀಯ ಪಕ್ಷಗಳ ಅಭ್ಯರ್ಥಿಗಳಾಗಿದ್ದಾರೆ.
'ಕನಿಷ್ಠ ಒಬ್ಬ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಸಂಪ್ರದಾಯವನ್ನು ಕಾಂಗ್ರೆಸ್ ಪಕ್ಷ ಪಾಲಿಸಿಕೊಂಡು ಬರುತ್ತಿತ್ತು. ಭರೂಚ್ ಕ್ಷೇತ್ರವನ್ನು ಮುಸ್ಲಿಮರಿಗೆ ಮೀಸಲಿಟ್ಟಿತ್ತು. ಆದರೆ ಈ ಬಾರಿ ಅಲ್ಲಿಂದ ಎಎಪಿ ಅಭ್ಯರ್ಥಿ ಕಣಕ್ಕಿಳಿದಿರುವುದರಿಂದ ನಮಗೆ ಅವಕಾಶ ಕೈತಪ್ಪಿದೆ' ಎಂದು ಗುಜರಾತ್ ಕಾಂಗ್ರೆಸ್‌ನ ಅಲ್ಪಸಂಖ್ಯಾತ ಘಟಕದ ಮುಖ್ಯಸ್ಥ ವಜೀರ್‌ಖಾನ್ ಪಠಾಣ್ ಹೇಳಿದರು.
'ಬೇರೆ ಯಾವುದೇ ಕ್ಷೇತ್ರದಿಂದ ಮುಸ್ಲಿಮ್ ಅಭ್ಯರ್ಥಿ ಸ್ಪರ್ಧಿಸಲು ಅವಕಾಶವಿಲ್ಲ. ಅಹಮದಾಬಾದ್ ಪಶ್ಚಿಮ ಮತ್ತು ಕಛ್ ಕ್ಷೇತ್ರಗಳಲ್ಲಿ ಮುಸ್ಲಿಮ್ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದರೆ ಈ ಎರಡೂ ಕ್ಷೇತ್ರಗಳು ಎಸ್‌ಸಿಗೆ ಮೀಸಲಾಗಿವೆ' ಎಂದರು.
ಗುಜರಾತ್‌ನ 26 ಲೋಕಸಭಾ ಕ್ಷೇತ್ರಗಳಲ್ಲಿ 25 ಕ್ಷೇತ್ರಗಳಿಗೆ ಮೇ 7 ರಂದು ಮತದಾನ ನಡೆಯಲಿದೆ. ಸೂರತ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.