ಕೈರೊ: ಇಸ್ರೇಲ್ ಪಡೆಗಳು ಗುರುವಾರ ಗಾಜಾ ಪಟ್ಟಿಯಾದ್ಯಂತ ನಡೆಸಿದ ಭೂ ಮತ್ತು ವೈಮಾನಿಕ ಬಾಂಬ್ ದಾಳಿಯಲ್ಲಿ 38 ಮಂದಿ ಪ್ಯಾಲೆಸ್ಟೀನ್ ನಾಗರಿಕರು ಹತರಾಗಿದ್ದಾರೆ. ರಫಾ ನಗರದಲ್ಲಿ ಇಸ್ರೇಲ್ ಸೇನೆ ಮತ್ತು ಹಮಾಸ್ ಬಂಡುಕೋರರ ನಡುವೆ ಕದನ ತೀವ್ರಗೊಂಡಿದೆ ಎಂದು ಅಧಿಕಾರಿಗಳು ಮತ್ತು ಸ್ಥಳೀಯ ಮಾಧ್ಯಮಗಳು ಹೇಳಿವೆ.
ಇಸ್ರೇಲ್‌ನ ಯುದ್ಧ ಟ್ಯಾಂಕ್‌ಗಳು ರಫಾದ ಆಗ್ನೇಯದಲ್ಲಿ ಮುನ್ನುಗ್ಗುತ್ತಿವೆ. ನಗರದ ಪಶ್ಚಿಮ ಜಿಲ್ಲೆಯ ಯಿಬ್ನಾದ ಗಡಿಯಂಚಿಗೆ ಬಂದು ಮೂರು ಪೂರ್ವ ಉಪನಗರಗಳಲ್ಲಿ ಕಾರ್ಯಾಚರಣೆ ಮುಂದುವರೆಸಿವೆ ಎಂದು ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ.
ಹಮಾಸ್ ಹೋರಾಟಗಾರರ ಕೊನೆಯ ಬೆಟಾಲಿಯನ್‌ಗಳನ್ನು ಬೇರು ಸಮೇತ ಕಿತ್ತೊಗೆಯಲು ರಫಾ ಮೇಲೆ ದಾಳಿ ಮಾಡುವುದನ್ನು ಬಿಟ್ಟು ತಮಗೆ ಬೇರೆ ದಾರಿಯಿಲ್ಲ ಎಂದು ಇಸ್ರೇಲ್ ಹೇಳಿದೆ.
'ರಫಾದಲ್ಲಿ ಹಮಾಸ್ ಇದೆ. ಹಮಾಸ್ ರಫಾದಲ್ಲಿ ಒತ್ತೆಯಾಳುಗಳನ್ನು ಹಿಡಿದಿಟ್ಟುಕೊಂಡಿದೆ. ಅದಕ್ಕಾಗಿಯೇ ನಮ್ಮ ಪಡೆಗಳು ರಫಾದಲ್ಲಿ ಕಾರ್ಯಾಚರಣೆ ನಡೆಸುತ್ತಿವೆ' ಎಂದು ಇಸ್ರೇಲ್ ಸೇನೆಯ ಮುಖ್ಯ ವಕ್ತಾರ ರಿಯರ್ ಅಡ್ಮಿರಲ್ ಡೇನಿಯಲ್ ಹಗರಿ ಗುರುವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ.