ಕಾಸರಗೋಡು: ಬೇಸಿಗೆ ರಜೆ ಕಳೆದು ಕೇರಳ ರಆಜ್ಯಾದ್ಯಂತ ಜೂನ್ 3ರಂದು ಶಾಲಾ ತರಗತಿ ಪುನರಾರಂಭಗೊಳ್ಲಲಿದ್ದು, ಅದೇ ದಿನ ಶಾಲಾ ಪ್ರವೇಶೋತ್ಸವ ನಡೆಯಲಿದೆ. ಶಾಲಾ ತರಗತಿ ತೆರೆದು ಕಾರ್ಯಾಚರಿಸುವ ಮೊದಲು ಆಯಾ ಶಿಕ್ಷಣ ಸಂಸ್ಥೆಗಳು ಸಿದ್ಧತೆ ಪೂರ್ತಿಗೊಳಿಸುವಂತೆಯೂ ಸೂಚಿಸಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿರುವನಂತಪುರದಲ್ಲಿ ಶನಿವಾರ ಅಧಿಕಾರಿಗಳ ಉನ್ನತ ಮಟ್ಟದ ಸಭೆ ನಡೆಸಿ ಅಗತ್ಯ ನಿರ್ದೇಶ ನೀಡಿದರು.
ಪ್ರವೇಶೋತ್ಸವಕ್ಕೂ ಮೊದಲು ಶಾಲೆಗಳ ಸುರಕ್ಷಾ ವ್ಯವಸ್ಥೆ ಖಚಿತಪಡಿಸಿಕೊಳ್ಳುವುದರೊಂದಿಗೆ ಸಣ್ಣಪುಟ್ಟ ಕೆಲಸಕಾರ್ಯಗಳನ್ನು ಪೂರ್ತಿಗೊಳಿಸಿರಬೇಕು. ಶಾಲಾ ಕಟ್ಟಡಗಳ, ಶಾಲಾ ವಾಹನ, ಮಕ್ಕಳನ್ನು ಶಾಲೆಗೆ ಕರೆತರುವ ಇತರ ಖಾಸಗಿ ವಾಹನಗಳ ಫಿಟ್‍ನೆಸ್ ಸರ್ಟಿಫಿಕೇಟ್ ಹೊಂದಿರಬೇಕು. ಶಾಲಾ ವಠಾರದಲ್ಲಿ ಮಾದಕ ದ್ರವ್ಯ, ತಂಬಾಕು ಉತ್ಪನ್ನ ಮಾರಾಟ ನಡೆಸಲಾಗುತ್ತಿಲ್ಲ ಎಂಬ ಅಂಶವನ್ನೂ ಖಚಿತಪಡಿಸಿಕೊಳ್ಳಬೇಕು. ಈ ಬಗ್ಗೆ ಅಬಕಾರಿ ಹಾಗೂ ಪೊಲೀಸರು ನಿಗದಿತ ಕಾಲಾವಧಿಯಲ್ಲಿ ಅಗತ್ಯ ತಪಾಸಣೆ ನಡೆಸುವಂತೆಯೂ ಸೂಚಿಸಲಾಗಿದೆ.