ನವದೆಹಲಿ: ಕರ್ನಾಟಕ ಸೇರಿದಂತೆ 11 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 93 ಕ್ಷೇತ್ರಗಳಲ್ಲಿ ಲೋಕಸಭೆ ಚುನಾವಣೆಯ ಮೂರನೇ ಹಂತದ ಮತದಾನ ಮಂಗಳವಾರ ಮುಕ್ತಾಯವಾಗಿದ್ದು, ಸುಮಾರು ಶೇ. 62 ರಷ್ಟು ಮತದಾನವಾಗಿದೆ.
ಅಸ್ಸಾಂನಲ್ಲಿ ಅತಿ ಹೆಚ್ಚು ಅಂದರೆ ಶೇ.75.53 ಮತದಾನವಾಗಿದ್ದು, ಗೋವಾದಲ್ಲಿ ಶೇ.74.47 ಮತ್ತು ಪಶ್ಚಿಮ ಬಂಗಾಳ ಶೇ.73.93, ಮಹಾರಾಷ್ಟ್ರದಲ್ಲಿ ಅತಿ ಕಡಿಮೆ ಶೇ.55.54, ಬಿಹಾರ ಶೇ.56.55 ಮತ್ತು ಗುಜರಾತ್ ನಲ್ಲಿ ಶೇ.56.98 ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗದ ಅಂಕಿಅಂಶಗಳು ತಿಳಿಸಿವೆ.
ಚುನಾವಣಾ ಆಯೋಗದ ಪ್ರಕಾರ, ಅಂಕಿಅಂಶಗಳು "ಅಂದಾಜು ಟ್ರೆಂಡ್" ಇದಾಗಿದ್ದು, ದತ್ತಾಂಶ ಸಂಗ್ರಹವಾಗುತ್ತಿದ್ದಂತೆ ಏರಿಕೆಯಾಗುವ ಸಾಧ್ಯತೆಯಿದೆ.
ಮತದಾನವು ಮುಕ್ತಾಯಗೊಳ್ಳುವ ಅಧಿಕೃತ ಸಮಯ ಸಂಜೆ 6 ಗಂಟೆಯಾಗಿದ್ದರೆ, ನಿಗದಿತ ಮತದಾನದ ಅವಧಿಯ ಅಂತ್ಯದ ಮೊದಲು ಸರದಿಯಲ್ಲಿ ಬಂದ ಮತದಾರರು ತಮ್ಮ ಹಕ್ಕು ಚಲಾಯಿಸಲು ಅವಕಾಶ ನೀಡಲಾಗಿದೆ.
ಇತರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪೈಕಿ ಉತ್ತರ ಪ್ರದೇಶ ಶೇ.57.34, ಛತ್ತೀಸ್‌ಗಢ ಶೇ.67.64, ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ಮತ್ತು ದಿಯುನಲ್ಲಿ ಶೇ.65.23, ಕರ್ನಾಟಕ ಶೇ.68.85 ಮತ್ತು ಮಧ್ಯಪ್ರದೇಶದಲ್ಲಿ ಶೇ.64.02 ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಮೂರನೇ ಹಂತದಲ್ಲಿ 120 ಮಹಿಳೆಯರು ಸೇರಿದಂತೆ ಒಟ್ಟು 1300 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಕೇಂದ್ರ ಸಚಿವರಾದ ಅಮಿತ್ ಶಾ (ಗಾಂಧಿನಗರ), ಜ್ಯೋತಿರಾದಿತ್ಯ ಸಿಂಧಿಯಾ (ಗುಣ), ಮನ್ಸುಖ್ ಮಾಂಡವಿಯಾ ಸೇರಿದಂತೆ 1300 ಅಭ್ಯರ್ಥಿಗಳ ಭವಿಷ್ಯ ಮತಯಂತ್ರ ಸೇರಿದೆ.