ಇಂಫಾಲ: ಮಣಿಪುರದಲ್ಲಿ ಭಾರಿ ಮಳೆಯಿಂದಾಗಿ ಉಂಟಾಗಿರುವ ಪ್ರವಾಹದಿಂದಾಗಿ ಮೂರು ಮಂದಿ ಸಾವಿಗೀಡಾಗಿದ್ದಾರೆ. ಸಾವಿರಾರು ಮಂದಿ ಪ್ರವಾಹದಿಂದ ತೊಂದರೆಗೀಡಾಗಿದ್ದಾರೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ಇಂಫಾಲ: ಮಣಿಪುರದಲ್ಲಿ ಭಾರಿ ಮಳೆಯಿಂದಾಗಿ ಉಂಟಾಗಿರುವ ಪ್ರವಾಹದಿಂದಾಗಿ ಮೂರು ಮಂದಿ ಸಾವಿಗೀಡಾಗಿದ್ದಾರೆ. ಸಾವಿರಾರು ಮಂದಿ ಪ್ರವಾಹದಿಂದ ತೊಂದರೆಗೀಡಾಗಿದ್ದಾರೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ಸೇನಾಪತಿ ಜಿಲ್ಲೆಯ ತೋಂಗ್‌ಲಾಂಗ್ ರಸ್ತೆಯಲ್ಲಿ ಭಾರಿ ಮಳೆಯಿಂದ ಭೂಕುಸಿತ ಸಂಭವಿಸಿ 34 ವರ್ಷದ ವ್ಯಕ್ತಿ ಸಾವಿಗೀಡಾಗಿದ್ದಾರೆ.
ಜೋರಾಗಿ ಮಳೆ ಸುರಿಯುತ್ತಿರುವ ವೇಳೆ ವಿದ್ಯುತ್ ಕಂಬದ ಬಳಿ ಇದ್ದ 75 ವರ್ಷದ ವ್ಯಕ್ತಿ ವಿದ್ಯುತ್ ಸ್ಪರ್ಶಿಸಿ ಅಸುನೀಗಿದ್ದಾರೆ. ಇಂಫಾಲ್ ನದಿ ತುಂಬಿ ಹರಿಯುತ್ತಿದ್ದು, ಇಂಫಾಲ ಕಣಿವೆಯಲ್ಲಿನ ಹಲವು ಮರಗಳಿಗೆ ನೀರು ನುಗ್ಗಿದೆ. ಜನರು ಸಮೀಪದ ಸಮುದಾಯ ಭವನದಲ್ಲಿ ಆಶ್ರಯ ಪಡೆದಿದ್ದಾರೆ.
ನಂಬುಲ್ ನದಿ ತುಂಬಿ ಹರಿಯುತ್ತಿರುವುದರಿಂದ ಖುಮನ್, ಲಂಪಕ್, ನಗರಮ್, ಸಗೊಲ್‌ಬಂದ್, ಉರಿಪೋಕ್, ಕೈಸಮ್ತೋಂಗ್ ಹಾಗೂ ಪನೋವಾ ಸೇರಿ ಇಂಫಾಲ ಪಶ್ಚಿಮ ಜಿಲ್ಲೆಯ 886 ಪ್ರದೇಶಗಳು ಜಲಾವೃತಗೊಂಡಿವೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ತಂಡವೊಂದು ಬುಧವಾರ ರಾತ್ರಿ 10 ಗಂಟೆಗೆ ವಿಶೇಷ ವಿಮಾನ ಮೂಲಕ ಇಂಫಾಲಕ್ಕೆ ಬಂದಿಳಿದಿದ್ದು, ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದೆ.
ನದಿಗಳು ಉಕ್ಕಿಹರಿದಿದ್ದರಿಂದ ಗ್ರಾಮಗಳಿಗೆ ನೀರು ನುಗ್ಗಿ ಜನ-ಜಾನುವಾರುಗಳಿಗೆ ಸಮಸ್ಯೆ ಉಂಟಾಗಿದೆ. ರಾಜ್ಯ ಸರ್ಕಾರ, ಎನ್‌ಡಿಆರ್‌ಎಫ್, ಸ್ಥಳೀಯ ಸ್ವಯಂ ಸೇವಕರು ಸೇರಿ ಎಲ್ಲಾ ಸಂಬಂಧಪಟ್ಟ ಅಧಿಕಾರಿಗಳು ತೊಂದರೆಗೀಡಾದ ಜನರ ಸಹಾಯಕ್ಕೆ ಲಭ್ಯರಿದ್ದಾರೆ ಎಂದು ಮುಖ್ಯಮಂತ್ರಿ ಬಿರೇನ್ ಸಿಂಗ್ ಹೇಳಿದ್ದಾರೆ.