ಮುಳ್ಳೇರಿಯ : ಕೇರಳದಲ್ಲಿ ವ್ಯಾಪಕವಾಗಿ ಬೆಳೆಯುತ್ತಿರುವ ಸಹಕಾರಿ ಬಾಂಕ್ ವಂಚನೆ ಪ್ರಕರಣಗಳು ಕಾಸರಗೋಡಿಗೂ ಕಾಲಿರಿಸಿದ್ದು, ಹೊಸ ವರಸೆಯೊಂದಿಗೆ ಜಿಲ್ಲೆಯನ್ನು ಕಳವಳಕ್ಕೆ ದೂಡಿದೆ.
ಮುಳ್ಳೇರಿಯದಲ್ಲಿರುವ ಕಾರಡ್ಕ ಅಗ್ರಿಕಲ್ಚರಿಸ್ಟ್ ವೆಲ್ಫೇರ್ ಕೊಆಪರೇಟಿವ್ ಸೊಸೈಟಿಯಿಂದ ಈಡಿನ ಚಿನ್ನಾಭರಣ ವಂಚಿಸಿ ಕಾರ್ಯದರ್ಶಿ ನಾಪತ್ತೆಯಾದ ಬಗ್ಗೆ ಆದೂರು ಪೋಲಿಸರು ಕೇಸು ದಾಖಲಿಸಿಕೊಂಡಿದ್ದಾರೆ. ಸಿಪಿಐಎಂ ಆಧೀನತೆಯಲ್ಲಿರುವ. ಈ ಸೊಸೈಟಿಯಲ್ಲಿ ಸಿಪಿಐಎಂ ಮುಳ್ಳೇರಿಯ ಲೋಕಲ್ ಸಮಿತಿ ಸದಸ್ಯ ಕರ್ಮಂತ್ತೋಡಿ ನಿವಾಸಿ ಕೆ. ರತೀಶ್ ಈ ರೀತಿ ವಂಚಿಸಿ ನಾಪತ್ತೆಯಾಗಿರುವ ಬಗ್ಗೆ ಸೊಸೈಟಿ ಅಧ್ಯಕ್ಷ ಬೆಳ್ಳೂರು ನಾಟೆಕಲ್ಲಿನ ಸೂಫಿ ನೀಡಿದ ದೂರಿನಂತೆ ಆರೋಪಿ ವಿರುದ್ಧ ಜಾಮೀನು ರಹಿತ ಕೇಸು ದಾಖಲಿಸಲಾಗಿದೆ. 4 ಕೋಟಿ 75 ಲಕ್ಷ ರೂಗಳ ಚಿನ್ನಾಭರಣ ಸಾಲದ ನೆಪದಲ್ಲಿ ವಂಚನೆ ನಡೆದಿದೆ ಎನ್ನಲಾಗಿದೆ.
ದೇಶವ್ಯಾಪಿಯಾಗಿ ಜನಸಾಮಾನ್ಯರಿಗೆ ಒಂದು ಕಾಲದಲ್ಲಿ ಆಶಾಕಿರಣಗಳಾಗಿದ್ದ ಸಹಕಾರಿ ಬ್ಯಾಂಕ್ ಗಳು ರಾಜ್ಯದಲ್ಲಿ ಇದೀಗ ಪಥ ಬದಲಿಸಿ ಜನಸಾಮಾನ್ಯರನ್ನು ವಂಚಿಸುವ, ಹಗಲು ದರೋಡೆಕೇಂದ್ರಗಳಾಗಿ ಬದಲಾಗುತ್ತಿದ್ದು, ಕಳವಳ ಮೂಡಿಸಿದೆ.