ಮುಳ್ಳೇರಿಯ: ಕೇರಳದಲ್ಲಿ ಕೋಲಾಹಲ ಸೃಷ್ಟಿಸಿದ ಸಿಪಿಎಂ ನೇತೃತ್ವದ ಕರುವನ್ನೂರ್ ಸಹಕಾರಿ ಬ್ಯಾಂಕ್ ವಂಚನಾ ಹಗರಣದ ತನಿಖೆ ಪ್ರಗತಿಯಲ್ಲಿರುವ ಮಧ್ಯೆ ಕಾಸರಗೋಡಿನಲ್ಲೂ ಬೆಳಕಿಗೆ ಬಂದ ಸಿಪಿಎಂ ಅಧೀನದ ಕಾರಡ್ಕ ಅಗ್ರಿಕಲ್ಚರಿಸ್ಟ್ ವೆಲ್ಫೇರ್ ಕೋಓಪರೇಟಿವ್ ಸೊಸೈಟಿಯ ಭಾರೀ ವಂಚನಾ ಹಗರಣದ ತನಿಖೆ ಕ್ರೈಂ ಬ್ರಾಂಚ್ ಗೆ ಹಸ್ತಾಂತರಿಸುವ ಸೂಚನೆ ಲಭಿಸಿದೆ.
ಆಡಳಿತ ಮಂಡಳಿ ಸದಸ್ಯರಿಗೆ ತಿಳಿಯದೆ 4.76ಕೋಟಿ ರೂ. ಮೊತ್ತದ ಚಿನ್ನಾಭರಣ ಈಡಿನ ಸಾಲ ಪಡೆಯುವ ಮೂಲಕ ವಂಚಿಸಿರುವ ಬಗ್ಗೆ ಸಹಕಾರಿ ಸಂಘ ಕಾರ್ಯದರ್ಶಿ, ಕರ್ಮಂತೋಡಿ ನಿವಾಸಿ ಕೆ. ರತೀಶ್ ಎಂಬಾತನ ವಿರುದ್ಧ ಆದೂರು ಠಾಣೆ ಪೊಲೀಸರು ಜಾಮೀನುರಹಿತ ಕೇಸು ದಾಕಲಿಸಿಕೊಂಡಿದ್ದಾರೆ. ಕಾರಡ್ಕ ಅಗ್ರಿಕಲ್ಚರಿಸ್ಟ್ ವೆಲ್ಫೇರ್ ಕೋಓಪರೇಟಿವ್ ಸೊಸೈಟಿ ಆಡಳಿತ ಮಂಡಳಿ ಅಧ್ಯಕ್ಷ ಬೆಳ್ಳೂರು ಕಿನ್ನಿಂಗಾರ್ ನಿವಾಸಿ ಕೆ. ಸಊಫಿ ಅವರು ನಿಡಿದ ದೂರಿನ ಮೇರೆಗೆ ಈ ಕೇಸು ದಾಖಲಾಗಿದೆ. ಈ ಮಧ್ಯೆ ರತೀಶ್ ತಲೆಮರೆಸಿಕೊಂಡಿದ್ದಾನೆ. ಸಿಪಿಎಂ ಮುಳ್ಳೇರಿಯ ಸ್ಥಳೀಯ ಸಮಿತಿ ಸದಸ್ಯ ಸ್ಥಾನದಿಂದ ಪಕ್ಷ ಈತನನ್ನು ಅಮಾನತುಗೊಳಿಸಿದೆ.
ಪ್ರಾಥಮಿಕ ಪರಿಶೋಧನೆಯಿಂದ 4,75,99,907 ರೂ. ಮೊತ್ತದ ವಂಚನೆ ಪತ್ತೆಹಚ್ಚಲಾಗಿದೆ. ಇದರಲ್ಲಿ ಚಿನ್ನಾಭರಣ ಪಡೆಯದೇ ಏಳು ಲಕ್ಷ ರೂ. ಸಾಳ ನೀಡಿರುವುದನ್ನೂ ಪತ್ತೆಹಚ್ಚಲಾಗಿದೆ. 2024 ಜನವರಿಯಿಂದ ತೊಡಗಿ ವಿವಿಧ ದಿನಗಳಲ್ಲಾಗಿ ಹಣ ಸಾಲವಾಗಿ ನೀಡಲಾಗಿದೆ. ಸಹಕಾರಿ ಇಲಾಖೆ ನಡೆಸಿದ ತಪಾಸಣೆಯಿಂದ ವಂಚನೆ ಬಯಲಿಗೆ ಬಂದಿದೆ. ಆರೋಪಿ ಬೆಂಗಳೂರಿಗೆ ಪರಾರಿಯಾಗಿರುವ ಬಗ್ಗೆ ಸೈಬರ್‍ಸೆಲ್ ಮೂಲಕ ಪೊಲೀಸರು ಪತ್ತೆಹಚ್ಚಿದ್ದು, ಈತನ ಬಂಧನಕ್ಕೆ ಪೊಲೀಸರು ಕ್ರಮ ಆರಂಭಿಸಿದ್ದಾರೆ. ಪ್ರಕರಣವನ್ನು ಕ್ರೈಂ ಬ್ರಾಂಚ್‍ಗೆ ಹಸ್ತಾಂತರಿಸುವ ಸೂಚನೆ ಲಭಿಸಿದೆ.